ಪ್ರತಾಪ್ ಸಿಂಹ ಸುಳ್ಳು ಸುದ್ದಿ ಹಬ್ಬಿಸುವ ಪಿತಾಮಹ : ರಮೇಶ್ ಬಾಬು

ಬೆಂಗಳೂರು : ಸೂಕ್ಷ್ಮ ಮನಸ್ಸಿನ ಯುವಕರನ್ನು ಪ್ರಚೋದಿಸಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಪಿತಾಮಹ ಮಾಜಿ ಸಂಸದ ಪ್ರತಾಪ್ ಸಿಂಹ ಆಗಿದ್ದು, ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲು ಪ್ರತಾಪ್ ಸಿಂಹನನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.
ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೂಕ್ಷ್ಮ ಮನಸ್ಸಿನ ಯುವಕರನ್ನು ಪ್ರಚೋದಿಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಹೀಗೆ ಸುದ್ದಿಗಳನ್ನು ಹರಡಲು ಕಾರಣವೇ ಮಾಜಿ ಸಂಸದ ಪ್ರತಾಪ್ ಸಿಂಹ ಎಂದು ಟೀಕಿಸಿದರು.
ಕೊಡಗಿನಲ್ಲಿ ಬಿಜೆಪಿ ಬಿಟ್ಟರೇ ಬೇರೆ ಯಾರೂ ಸಹ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ ಪ್ರತಾಪ್ ಸಿಂಹ ಅವರ ಮಾತು ಸುಳ್ಳಾಯಿತು. ಈ ಇಬ್ಬರು ಕಾಂಗ್ರೆಸ್ ಶಾಸಕರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಹಾಳು ಮಾಡಲು ಈ ರೀತಿಯ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ, ಸರಕಾರದ ಕೆಲಸಗಳ ಮೇಲೆ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಚಿತಾವಣೆಯೇ ಅಡಗಿದೆ ಎಂದೂ ಅವರು ಉಲ್ಲೇಖಿಸಿದರು.
ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರನ್ನು ತನಿಖೆಗೆ ಒಳಪಡಿಸಬೇಕು. ಏಕೆಂದರೆ ಪ್ರಚೋದನೆಯಲ್ಲಿ ಇವರ ಪಾತ್ರವಿದೆ ಎನ್ನುವುದು ನನ್ನ ನಂಬಿಕೆ. ಅಲ್ಲದೆ, ಸಾರ್ವಜನಿಕ ಜೀವನದಲ್ಲಿ ಇರುವ ನಾವುಗಳು ಟೀಕೆ, ಟಿಪ್ಪಣಿಗಳನ್ನು ಸ್ವೀಕರಿಸುವ ಮನಸ್ಥಿತಿ ಇರಬೇಕು. ಮಹಾನ್ ನಾಟಕಕಾರರಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಾಪ್ ಸಿಂಹ, ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಶವಸಂಸ್ಕಾರಕ್ಕೂ ಮುಂಚಿತವಾಗಿ ಓಡಿ ಹೋದರು. ಮೃತನ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ಅಲ್ಲದೆ, ಯುವಕನ ಆತ್ಮಹತ್ಯೆ ಒಂದು ವಿಷಾದನೀಯ ವಿಚಾರ. ಇದರ ಬಗ್ಗೆ ನಮಗೆಲ್ಲರಿಗೂ ದುಃಖವಿದೆ. ಕೇವಲ ಬಿಜೆಪಿಯವರಿಗೆ ಮಾತ್ರ ಬೇಸರದ ವಿಚಾರವಲ್ಲ ಕರ್ನಾಟಕದ ಪ್ರಜ್ಞಾವಂತ ಜನರಿಗೂ ಬೇಸರವಾಗುತ್ತದೆ. ಆದರೆ, ರಾಜಕೀಯ ತೆವಲಿಗೆ ಸಾವನ್ನು ಬಳಸಿಕೊಳ್ಳಬೇಡಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.