ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು : ಸಿಎಂ ಸಿದ್ದರಾಮಯ್ಯ

Update: 2025-04-14 20:24 IST
ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು : ಸಿಎಂ ಸಿದ್ದರಾಮಯ್ಯ
  • whatsapp icon

ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಸೈದ್ದಾಂತಿಕ ಹೋರಾಟವನ್ನು ನಾವು ನೀವೆಲ್ಲಾ ಮುನ್ನಡೆಸಬೇಕು. ಬಿಜೆಪಿ ಮತ್ತು ಸಂಘ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ, ಸತ್ಯ ಹೇಳುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದನ್ನು, ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜನರಿಗೆ, ಇವತ್ತಿನ ಯುವ ಸಮುದಾಯಕ್ಕೆ ಸತ್ಯವನ್ನು ಅರ್ಥ ಮಾಡಿಸಬೇಕು. ಮನುಸ್ಮೃತಿ ಮತ್ತು ಜಾತಿ ವ್ಯವಸ್ಥೆ ಕಾರಣದಿಂದ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗಿದ್ದ ಎಲ್ಲಾ ಜಾತಿ, ಸಮುದಾಯಗಳನ್ನು ದೌರ್ಜನ್ಯ ಮುಕ್ತಗೊಳಿಸಲು ಅಂಬೇಡ್ಕರ್ ಅವರ ಬದುಕು ಮುಡಿಪಾಗಿತ್ತು ಎಂದು ಅವರು ಹೇಳಿದರು.

ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಮಾಡಿದ ಐತಿಹಾಸಿಕ ಭಾಷಣದಲ್ಲಿ, ‘ಸಂವಿಧಾನ ಜಾರಿಯ ಈ ದಿನದಿಂದ ನಾವು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಅಸಮಾನತೆ ಇರುವ ಸಮಾಜಕ್ಕೆ ಪ್ರವೇಶ ಪಡೆಯುತ್ತಿದ್ದೇವೆ. ಈ ಅಸಮಾನತೆ ಹೋಗದೆ ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ ಎಂದಿದ್ದರು’. ಸಂವಿಧಾನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಿದ್ದ ನೂರಾರು ಜಾತಿ, ಸಮುದಾಯಗಳಿಗೆ ಶಿಕ್ಷಣ ದೊರೆಯುವಂತಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.

1952ರ ಜ.18 ರಂದು ಅಂಬೇಡ್ಕರ್ ತಮ್ಮ ಕೈಯಾರೆ ತಮ್ಮದೇ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಢಾಂಗೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೂ ಬಿಜೆಪಿಯವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಹೇಳುತ್ತಾ ಮನುವಾದಿಗಳು, ಬಿಜೆಪಿಯವರು ತಿರುಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸತ್ಯವನ್ನು ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣುವ ಎಲ್ಲರ ಪ್ರಗತಿಗೆ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿ ಮಾಡಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಬಿಜೆಪಿಯವರಿಗೆ ಸಾರ್ವಕರ್ ಮತ್ತು ಗಾಂಧಿಯನ್ನು ಕೊಲೆ ಮಾಡಿದ ಗೋಡ್ಸೆ ಬಿಟ್ಟು ಉಳಿದ ಯಾರೂ ಬೇಕಾಗಿಲ್ಲ. ಆದರೆ ನಮಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎನ್ನುವ ಮೂರು ಮಂತ್ರಗಳನ್ನು ನೀಡಿದ ಅಂಬೇಡ್ಕರ್ ನಮ್ಮವರು, ಇವರು ನಮಗೆ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಅಂಬೇಡ್ಕರ್ ವಸ್ತು ಸಂಗ್ರಹಾಲಯ: ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್(ವಸ್ತು ಸಂಗ್ರಹಾಲಯ)ರಚಿಸಲಾಗುವುದು ಮತ್ತು ಇಡೀ ದೇಶದಲ್ಲೇ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಪ್ರಧಾನಿ ಮೋದಿಗೆ ಸವಾಲೆಸೆದ ಸಿಎಂ: ನಾವು ರಾಜ್ಯದಲ್ಲಿ ಜಾರಿಗೆ ತಂದಿರುವ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲು ನಿಮ್ಮಿಂದ ಸಾಧ್ಯವಾ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ರಾಷ್ಟ್ರಮಟ್ಟದಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದು ತೋರಿಸಿ ಎಂದು ಸವಾಲು ಹಾಕಿದರು.

ನಮಗೆ ಹೋರಾಟ ಮಾಡುವ ಶಕ್ತಿ ಕೊಟ್ಟಿದ್ದು ಅಂಬೇಡ್ಕರ್: ಡಿ.ಕೆ.ಶಿವಕುಮಾರ್

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ನಮಗೆ ಹೋರಾಟ ಮಾಡುವ ಶಕ್ತಿ ಕೊಟ್ಟಿದ್ದಾರೆ. ಆ ಹೋರಾಟದ ಮೂಲಕವೇ ನಾವು ಜಯಿಸಬೇಕು. ನಮ್ಮದು ಕಾಂಗ್ರೆಸ್ ಜಾತಿ. ನಾವು ಇದನ್ನು ಮುಂದುವರಿಸಿಕೊಂಡು ಹೋಗೋಣ. ನಮ್ಮ ರಕ್ತದ ಕೊನೆ ಹನಿ ಇರುವವರೆಗೂ ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಇಂದು ಅಂಬೇಡ್ಕರ್ ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ. ಅವರ ಆಚಾರ, ವಿಚಾರಗಳನ್ನು ಸ್ಮರಿಸುತ್ತಿದ್ದೇವೆ. ಭಾರತದ ಆತ್ಮ ಸಂವಿಧಾನ ನೀಡಿದ ಪರಮಾತ್ಮನಿಗೆ ಗೌರವ ನೀಡಲು ನಾವು ಇಲ್ಲಿ ಸೇರಿದ್ದೇವೆ. ನಾವು ಇಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಪೂಜಿಸುತ್ತಿಲ್ಲ, ಅವರ ಪ್ರತಿಭೆಗೆ ಪೂಜಿಸುತ್ತಿದ್ದೇವೆ. ಅವರ ಪ್ರತಿಭೆ ಒಂದು ಸಮಾಜ, ಒಂದು ಧರ್ಮಕ್ಕೆ ಸೀಮಿತವಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News