ಮಂಗಳೂರಿನಲ್ಲಿ ಶೀಘ್ರವೇ ಹಜ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ : ಝುಲ್ಫಿಖರ್ ಅಹ್ಮದ್ ಖಾನ್

ಬೆಂಗಳೂರು : ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣವಾಗಬೇಕು ಎಂಬುದು ಕರಾವಳಿ ಭಾಗದ ಮುಸ್ಲಿಮರು ದಶಕಗಳ ಬೇಡಿಕೆಯಾಗಿದೆ. ಆದಷ್ಟು ಶೀಘ್ರವೇ ಹಜ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಆಕಾಂಕ್ಷಿಗಳಿಗೆ ನಗರದ ಹಜ್ ಭವನದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ತರಬೇತಿ ಶಿಬಿರದ ಸಮಾರೋಪದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಅವರ ಕುಟುಂಬ ಸದಸ್ಯರು ಮಂಗಳೂರಿನ ಬಜ್ಪೆ ಬಳಿ 1.8 ಎಕರೆ ಜಮೀನನ್ನು ರಾಜ್ಯ ಹಜ್ ಸಮಿತಿಗೆ ದಾನ ಮಾಡಿದ್ದಾರೆ. ಇದೇ ಎ.24ರಂದು ಹಜ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಅಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿರುವುದರಿಂದ, ಶೀಘ್ರವೇ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಗುಲ್ಬರ್ಗದಲ್ಲಿಯೂ ಹಜ್ ಭವನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿದ್ದು, ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲಿಯೂ ಶೀಘ್ರವೆ ಕಾಮಗಾರಿ ಆರಂಭಿಸಲಾಗುವುದು. ಅದೇ ರೀತಿ, ಬೀದರ್‌ನಲ್ಲಿ ಜಾವೇದ್ ಸಾಬ್ ಎಂಬವರು ಹಜ್ ಭವನ ನಿರ್ಮಾಣಕ್ಕೆ ಒಂದು ಎಕರೆ ಜಾಗ ದಾನ ನೀಡಲು ಮುಂದೆ ಬಂದಿದ್ದಾರೆ. ಅವರ ದಾಖಲಾತಿಗಳನ್ನೆಲ್ಲ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಝುಲ್ಫಿಖರ್ ಅಹ್ಮದ್ ಖಾನ್ ಹೇಳಿದರು.
ತರಬೇತಿ ಶಿಬಿರ: ಮೂರು ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಪ್ರತಿ ದಿನ ತಲಾ 1200 ಮಂದಿ ಭಾಗವಹಿಸಿದ್ದರು. ರಾಜ್ಯ ಹಜ್ ಸಮಿತಿ ವತಿಯಿಂದ ತೆರಳುವ ಹಜ್ ಯಾತ್ರೆಯ ಆಕಾಂಕ್ಷಿಗಳಲ್ಲದೇ, ಖಾಸಗಿ ಟೂರ್ ಆಪರೇಟರ್‍ಗಳ ಮೂಲಕ ತೆರಳುವವರಿಗೂ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದು ಅವರು ಹೇಳಿದರು.
ಹಜ್ ಕ್ಯಾಂಪ್ ಸಂದರ್ಭದಲ್ಲಿ ಯಾತ್ರಿಕರ ಸಂಬಂಧಿಕರು, ಸ್ನೇಹಿತರು, ಸ್ವಯಂ ಸೇವಕರು ಸೇರಿದಂತೆ ಸುಮಾರು 25 ರಿಂದ 30 ಸಾವಿರ ಮಂದಿಗೆ ಪ್ರತಿ ದಿನ ಸಚಿವ ಝಮೀರ್ ಅಹ್ಮದ್ ಖಾನ್ ಅವರ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಈಗಾಗಲೇ, ಹಜ್ ಭವನದಲ್ಲಿ ಯಾತ್ರೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು.
ಈಗಾಗಲೇ, ಬೀದರ್, ಗುಲ್ಬರ್ಗಾ, ಹೊಸಪೇಟೆಯಲ್ಲಿ ಹಜ್ ಯಾತ್ರಿಕರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಇದೀಗ, ಬೆಂಗಳೂರಿನಲ್ಲಿಯೂ ಮೂರು ದಿನಗಳ ತರಬೇತಿ ಶಿಬಿರ ಪೂರ್ಣಗೊಂಡಿದೆ. ಉಳಿದ ಕಡೆಯೂ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಎ.28ಕ್ಕೆ ಹಜ್‍ಯಾತ್ರೆ ವಿಮಾನಯಾನ ಉದ್ಘಾಟನೆ: ಹಜ್ ಭವನದ ಆವರಣದಲ್ಲಿ ಎ.28ರಂದು ಸಂಜೆ ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಿಕರ ವಿಮಾಯಾನ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಎ.29ರಿಂದ ಮೇ 15ರವರೆಗೆ ಬೆಂಗಳೂರಿನಿಂದ ಮದೀನಾ ವಿಮಾನ ನಿಲ್ದಾಣಕ್ಕೆ ಯಾತ್ರಿಗಳು ತೆರಳುತ್ತಾರೆ. ಈ ಬಾರಿ ರಾಜ್ಯ ಹಜ್ ಸಮಿತಿ ವತಿಯಿಂದ ಸುಮಾರು 8600 ಮಂದಿ ಹಜ್ ಯಾತ್ರೆಗೆ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.