ಸಂವಿಧಾನಕ್ಕೆ ಅಪಚಾರ ಆರೋಪ: ಕೆ.ಎನ್.ರಾಜಣ್ಣ ವಿರುದ್ಧ ದೂರು

Update: 2025-04-14 21:06 IST
ಸಂವಿಧಾನಕ್ಕೆ ಅಪಚಾರ ಆರೋಪ: ಕೆ.ಎನ್.ರಾಜಣ್ಣ ವಿರುದ್ಧ ದೂರು

 ಕೆ.ಎನ್.ರಾಜಣ್ಣ

  • whatsapp icon

ಬೆಂಗಳೂರು : ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆಂದು ಆರೋಪಿಸಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಇಲ್ಲಿನ ಜೆ.ಸಿ.ನಗರ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಜಿ. ಗಡಾದ ದೂರು ನೀಡಿದ್ದಾರೆ.

ರಾಜ್ಯದ ಮಂತ್ರಿಯಾಗಿ ಗೋಪ್ಯತಾ ಪಾಲನಾ ಪ್ರಮಾಣ ವಚನ ಸ್ವೀಕರಿಸಿರುವ ಸಹಕಾರ ಸಚಿವ ರಾಜಣ್ಣ ಅವರು ಸದನದಲ್ಲಿಯೇ ಹನಿಟ್ರ್ಯಾಪ್ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಗೋಪ್ಯತಾ ಪಾಲನಾ ಪ್ರಮಾಣ ವಚನ ಮಾಡಿದಂತೆ ನಡೆದುಕೊಳ್ಳದೇ ಸಂವಿಧಾನಕ್ಕೆ ಅಪಚಾರ ಎಸಗಿದ್ದು, ಅವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಸಚಿವ ಕೆ.ಎನ್.ರಾಜಣ್ಣ ಅವರು ಇತ್ತೀಚೆಗೆ ನಡೆದ ಸದನದಲ್ಲಿ ಹನಿಟ್ರ್ಯಾಪ್ ವಿಷಯ ಬಗ್ಗೆ ಪ್ರಸ್ತಾಪಿಸಿ, ರಾಜ್ಯ ರಾಷ್ಟ್ರ ಮಟ್ಟದ ಎಲ್ಲ ಪಕ್ಷಗಳ 48 ನಾಯಕರು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದು, ಅವರ ಪೆನ್‍ಡ್ರೈವ್‍ಗಳಿವೆ ಎಂದು ಸದನದಲ್ಲಿಯೇ ಬಹಿರಂಗಪಡಿಸಿದಲ್ಲದೇ ತನ್ನ ವಿರುದ್ಧವೂ ಹನಿಟ್ರ್ಯಾಪ್ ನಡೆದಿದ್ದು, ಈ ಕುರಿತು ಪುರಾವೆಗಳು ಇರುತ್ತದೆ ಎಂದಿದ್ದರು. ಸಚಿವರಾಗಿ ರಾಜಣ್ಣ ಅವರ ಹೇಳಿಕೆ ಗಮನಿಸಿದಾಗ ಅವರಿಗೆ ಸಂಪೂರ್ಣ ಮಾಹಿತಿ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಕೂಡಲೇ ಅವರನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸುವ ಅವಶ್ಯಕವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹನಿಟ್ರ್ಯಾಪ್ ವಿಷಯದ ಚರ್ಚೆಯಲ್ಲಿಯೇ 2 ದಿನಗಳ ಕಾಲ ಇಡೀ ಸದನದ ಕಾರ್ಯಕಲಾಪಗಳನ್ನು ಹಾಳು ಮಾಡಿದಲ್ಲದೇ ಸದನದ ಗೌರವ ಹಾಳು ಮಾಡಲಾಗಿದೆ. ಇದೆಲ್ಲದಕ್ಕೂ ಸಚಿವ ರಾಜಣ್ಣ ಕಾರಣಕರ್ತರಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News