ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಜಾತೀಯತೆ ಕಡಿಮೆಯಾಗಿಲ್ಲ: ಎಚ್.ಸಿ.ಮಹದೇವಪ್ಪ

ಬೆಂಗಳೂರು : ಸಂವಿಧಾನ ಜಾರಿಯಾಗಿ 75 ವರ್ಷಗಳು ಪೂರ್ಣಗೊಂಡಿದ್ದರೂ ಸಮಾಜದಲ್ಲಿ ಜಾತೀಯತೆ, ಧರ್ಮ ಆಧಾರಿತ ಹೋರಾಟಗಳು, ದ್ವೇಷಪೂರಿತ ನಡವಳಿಕೆಗಳು ಸಾರ್ವಭೌಮತ್ವವನ್ನು ಅಪಾಯಕ್ಕೆ ಸಿಲುಕಿಸಿದೆ. ಪ್ರಜಾಪ್ರಭುತ್ವವನ್ನು ಅರ್ಥೈಸದೇ ಹೋದರೆ ಸಮಾಜದ ಬದಲಾವಣೆ ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಮುಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಡಾ.ಬಿಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ನಮ್ಮ ಸರಕಾರದ ಉದ್ದೇಶವಾಗಿದೆ ಎಂದರು.
ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಬೆಳಗಾವಿಯಲ್ಲಿ ಜೈಬಾಪು, ಜೈಭೀಮ್ ಹಾಗೂ ಜೈಸಂವಿಧಾನ ಘೋಷಣೆಗಳನ್ನು ಕೂಗುವ ಮೂಲಕ ಮತ್ತೊಮ್ಮೆ ಸ್ವಾತಂತ್ರ್ಯದ ಉದ್ದೇಶವನ್ನು ಸಾರಲಾಗಿದೆ. ಪರಿಶ್ರಮ, ಹೋರಾಟ, ಆಳ ಅಧ್ಯಯನದ ಮೂಲಕ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಟ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಓದಲು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ನಿರರ್ಗಳವಾಗಿ ಓದುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು 25 ಲಕ್ಷ ಜನರು ಸೇರಿ 2500 ಕಿಲೋಮೀಟರ್ ಮಾನವ ಸರಪಳಿ ನಿರ್ಮಿಸುವ ಮೂಲಕ ವಿಶ್ವದಾಖಲೆ ಮಾಡಲಾಗಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಸಫಲ ಮಾಡುವಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾನತೆಯ ಸಮಸಮಾಜ ನಿರ್ಮಾಣಕ್ಕೆ ಕಂಠಕಪ್ರಾಯವಾಗಿದ್ದನ್ನು ಮನಗಂಡ ಮುಖ್ಯಮಂತ್ರಿಗಳು 5 ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ಧರ್ಮಾಧಾರಿತ ನಡವಳಿಕೆಗಳು, ಜನರ ವೈವಿಧ್ಯತೆ, ಸಾಂಸ್ಕೃತಿಕ ನಡವಳಿಕೆಗಳನ್ನು ನಾಶ ಮಾಡುವ ಪ್ರವೃತ್ತಿಗಳು ಇಂದಿಗೂ ನಡೆಯುತ್ತಿವೆ. ಹಾಗಾಗಿ ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ಮುಂಚೂಣಿಯಲ್ಲಿರಬೇಕು. ಸಮುದಾಯಗಳು ಜಾಗೃತರಾಗಬೇಕು. ದಲಿತರು, ಅಸ್ಪೃಶ್ಯರು ದಬ್ಬಾಳಿಕೆಗೆ ಒಳಗಾಗುವುದನ್ನು ರಕ್ಷಿಸಲು ನಾಗರಿಕ ಹಕ್ಕು ಪಡೆಯನ್ನು ಸ್ಥಾಪಿಸಿದ್ದು, ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಸಮೃದ್ಧ ಭಾರತ ಕನಸನ್ನು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಶಾಸಕ ರಿಝ್ವಾನ್ ಅರ್ಶದ್ ಮಾತನಾಡಿ, ಅಂಬೇಡ್ಕರ್ ರವರು ಕೇವಲ ಹೆಸರು ಮಾತ್ರವಲ್ಲ, ಅವರು ಭವ್ಯ ಭಾರತದ ಬೆಳಕು. ವಿವಿಧ ರೀತಿಯಲ್ಲಿ ಶೋಷಣೆಗೆ ಒಳಗಾದವವರಿಗೆ ನ್ಯಾಯ ಮತ್ತು ಸಮಾನತೆಯನ್ನು ಒದಗಿಸಿದ ಮಹಾನಾಯಕ. ಶೇ.80ರಷ್ಟು ಸಮುದಾಯದವರಿಗೆ ಸಾಮಾಜಿಕವಾಗಿ ನ್ಯಾಯ ಮತ್ತು ಸಮಾನತೆ ಗೌರವ ದೊರೆತಿರುವುದು ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಎಂದರು.
ಅಲ್ಪಸಂಖ್ಯಾತರ ಏಳಿಗೆಗಾಗಿ 4000 ಸಾವಿರ ಕೋಟಿ ರೂಪಾಯಿಯನ್ನು 2025-26ನೇ ಸಾಲಿನಲ್ಲಿ ಅನುದಾನವನ್ನು ನೀಡಲಾಗಿದೆ. ಈ ಸರಕಾರ ಎಲ್ಲಾ ವರ್ಗದವರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಈ ದಿನವನ್ನು ಸ್ವಾಭಿಮಾನ ದಿನವೆಂದು ಆಚರಿಸಬೇಕು ಎಂದು ರಿಝ್ವಾನ್ ಅರ್ಷದ್ ಹೇಳಿದರು.
ಮಾವಳ್ಳಿ ಶಂಕರ್, ಇಂದೂಧರ ಸಹಿತ ಹಲವರಿಗೆ ಡಾ.ಅಂಬೇಡ್ಕರ್ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಅದರಲ್ಲಿ, 2023ನೇ ಸಾಲಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಹರಿಹರಾ ನಂದಸ್ವಾಮಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಂದೂಧರ ಹೊನ್ನಾಪುರ, ಆಡಳಿತ ಕ್ಷೇತ್ರದಲ್ಲಿ ರುದ್ರಪ್ಪ ಹನಗವಾಡಿ, ದೇವದಾಸಿ ವಿಮೋಚನೆ ಕ್ಷೇತ್ರದಲ್ಲಿ ಸೀತವ್ವ ಜೋಡಟ್ಟಿ ಹಾಗೂ ಸಮಾಜ ಸೇವೆ, ರಾಜಕೀಯ ಕ್ಷೇತ್ರದಿಂದ ಕೆ. ಪುಂಡಲೀಕರಾವ್ ಶೆಟ್ಟಿಬಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
2024ನೇ ಸಾಲಿಗೆ ಹೋರಾಟ ಕ್ಷೇತ್ರದಿಂದ ಶ್ರೀಧರ ಕಲಿವೀರ, ಸಮಾಜ ಸೇವೆ, ರಾಜಕೀಯ ಕ್ಷೇತ್ರದಿಂದ ಮಲ್ಲಾಜಮ್ಮ, ಪತ್ರಿಕೋದ್ಯಮ ಕ್ಷೇತ್ರದಿಂದ ರಾಮದೇವರ ರಾಕೆ, ಸಾಹಿತ್ಯ/ಸಮಾಜ ಕ್ಷೇತ್ರದಿಂದ ವೈ.ಬಿ.ಹಿಮ್ಮಡಿ ಹಾಗೂ ಸಾಹಿತ್ಯ/ಸಂಘಟನೆ ಕ್ಷೇತ್ರದಿಂದ ಲಕ್ಷ್ಮೀಪತಿ ಕೋಲಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
2025ನೇ ಸಾಲಿಗೆ ಪ್ರಕಾಶನ ಕ್ಷೇತ್ರದಿಂದ ದತ್ತಾತ್ರೇಯ ಇಕ್ಕಳಗಿ, ಹೋರಾಟ ಕ್ಷೇತ್ರದಿಂದ ಮಾವಳ್ಳಿ ಶಂಕರ್ ಹಾಗೂ ಎಫ್.ಎಚ್.ಜಕ್ಕಪ್ಪನವರ್, ಜನಪದ ಕಲೆ ಕ್ಷೇತ್ರದಿಂದ ಹೊನ್ನೂರು ಗೌರಮ್ಮ ಹಾಗೂ ದಲಿತ ಹೋರಾಟ ಕ್ಷೇತ್ರದಿಂದ ಈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.