ಕಾನೂನು ಸುವ್ಯವಸ್ಥೆ ಸುಗಮ ಆಗಬೇಕಾದರೆ ಅಸಮಾನತೆ ಅಳಿಯಬೇಕು : ಸಿಎಂ ಸಿದ್ದರಾಮಯ್ಯ

Update: 2025-04-06 21:02 IST
ಕಾನೂನು ಸುವ್ಯವಸ್ಥೆ ಸುಗಮ ಆಗಬೇಕಾದರೆ ಅಸಮಾನತೆ ಅಳಿಯಬೇಕು : ಸಿಎಂ ಸಿದ್ದರಾಮಯ್ಯ
  • whatsapp icon

ಬೆಂಗಳೂರು : ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ ನಮ್ಮನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದ ವಿಧಾನಸೌಧ ಆವರಣದಲ್ಲಿ ನಡೆದ ಶಾಶ್ವತ ದೀಪಾಲಂಕಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಸಾರ್ಥಕಗೊಳಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಸಂಸತ್ತು ಮತ್ತು ವಿಧಾನಸೌಧ ಜನರು, ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದರು.

ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಅಸಮಾನತೆಯನ್ನು ಇನ್ನೂ ತೆಗೆದುಹಾಕಲು ಸಾಧ್ಯವಾಗಿಲ್ಲ. ವಿಧಾನಸೌಧ, ಸುವರ್ಣಸೌಧ, ವಿಕಾಸಸೌಧದಲ್ಲಿ ಕುಳಿತು ಸಮ ಸಮಾಜ ತರುವ ದಿಕ್ಕಿನಲ್ಲಿ ಶ್ರಮಿಸಬೇಕು. ಕಾನೂನು ಸುವ್ಯವಸ್ಥೆ ಸುಗಮ ಆಗಬೇಕಾದರೆ ಅಸಮಾನತೆ ಅಳಿಯಬೇಕು ಎಂದು ತಿಳಿಸಿದರು.

ಜನರ ಕೆಲಸ ಸರಿಯಾಗಿ ಮಾಡಲು ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಧಾನಸೌಧ ಕಟ್ಟಿಸಲಾಗಿದೆ. ಈ ಉದ್ದೇಶ ಈಡೇರಿಸಿ ಜನರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗೆ ಬರಲಿ, ರಾಜ್ಯದ ಜನತೆಗೂ ಆರ್ಥಿಕ ಶಕ್ತಿ ತರಲು ಯತ್ನಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News