ವಿನಯ್ ಸೋಮಯ್ಯ ಡೆತ್‍ನೋಟ್ ಯಾರು ಬೇಕಾದರೂ ಬರೆದಿರಬಹುದು : ಆಲೂರು ವೆಂಕಟೇಶ್

Update: 2025-04-06 22:06 IST
ವಿನಯ್ ಸೋಮಯ್ಯ ಡೆತ್‍ನೋಟ್ ಯಾರು ಬೇಕಾದರೂ ಬರೆದಿರಬಹುದು : ಆಲೂರು ವೆಂಕಟೇಶ್

 ವಿನಯ್ ಸೋಮಯ್ಯ

  • whatsapp icon

ಬೆಂಗಳೂರು : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಡೆತ್‍ನೋಟ್ ವಾಟ್ಸಪ್‍ನಲ್ಲಿದ್ದು, ಇದನ್ನು ಯಾರೂ ಬೇಕಾದರೂ ಬರೆದಿರಬಹುದು ಎಂದು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಆಲೂರು ವೆಂಕಟೇಶ್ ಶಂಕೆ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ವಿನಯ್ ಸೋಮಯ್ಯ ಬರೆದಿದ್ದಾರೆ ಎನ್ನಲಾದ ಡೆತ್‍ನೋಟ್ ವಾಟ್ಸಪ್‍ನಲ್ಲಿದೆ. ಹಾಗಾಗಿ, ಇದನ್ನು ಯಾರೂ ಬೇಕಾದರೂ ಬರೆದಿರಬಹುದು. ಈ ಸಂಬಂಧ ಮೃತರ ಸಹೋದರ ದೂರು ನೀಡಿದ್ದು ಇದನ್ನು ಪೊಲೀಸರು ತನಿಖೆ ಮಾಡಲಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿರುವ ವಿನಯ್ ಸೋಮಯ್ಯ ಸಾವಿನ ಹಿಂದೆ ಬೇರೆಯದೇ ಹುನ್ನಾರವಿದೆ. ಏಕೆಂದರೆ ಆರ್‍ಟಿಐ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡುವ ಅನೇಕ ಯುವಕರು ಧೈರ್ಯದಿಂದ ಇರುತ್ತಾರೆ. ಪ್ರಾಣ ಕಳೆದುಕೊಳ್ಳುವ ಕೆಲಸಕ್ಕೆ ಇಂತಹ ಕ್ಷೇತ್ರದಲ್ಲಿ ಇರುವವರು ಕೈ ಹಾಕುವುದಿಲ್ಲ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ತನ್ನೇರಾ ಮೈನಾ ಕೆಪಿಸಿಸಿ ಜಿಲ್ಲಾ ಸೋಶಿಯಲ್ ಮೀಡಿಯಾ ಉಸ್ತುವಾರಿ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಂದಂತಹ ಸುಳ್ಳು ಸುದ್ದಿಯನ್ನು ನೋಡಿ ಅದಕ್ಕೆ ಪ್ರತಿಕ್ರಿಯೆ ನೀಡುವ ಕೆಲಸ ಮಾಡಿದ್ದಾರೆ. ಇದರಲ್ಲಿ ಅವರದ್ದು ಲೋಪವಿಲ್ಲ. ಇನ್ನೂ, ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್ ಗೌಡ ಅವರಿಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ಗಮನಕ್ಕೂ ಬಂದಿಲ್ಲ ಎಂದು ಅವರು ಉಲ್ಲೇಖಿಸಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಮಾತನಾಡಿ, ವಿನಯ್ ಸೋಮಯ್ಯ ಎಲ್ಲಿಯೂ ಸಹ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿಲ್ಲ. ಇವರ ಸಹೋದರನು ಸಹ ದೂರಿನಲ್ಲಿ ಎಲ್ಲಿಯೂ ಬಿಜೆಪಿ ಕಾರ್ಯಕರ್ತ ಎಂದು ಹೇಳಿಲ್ಲ. ಈತ ಬಿಜೆಪಿ ಕಾರ್ಯಕರ್ತ ಎಂದು ಹೇಳುವುದಕ್ಕೆ ಯಾವುದೇ ಆಧಾರವಿಲ್ಲ. ಇಷ್ಟೆಲ್ಲಾ ಆದ ನಂತರವೂ ವಿನಯ್ ಅವರು ಏಕೆ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಕಿರುಕುಳವಾಗುತ್ತಿದೆ ಎಂದು ದೂರು ನೀಡಲಿಲ್ಲ. ಇವರ ಪಕ್ಷದ ನಾಯಕರು ನಿಯೋಗ ತೆಗೆದುಕೊಂಡು ಹೋಗಿ ಮನವಿ ನೀಡಬಹುದಾಗಿತ್ತು ಅಲ್ಲವೇ ಎಂದು ಪ್ರಶ್ನಿಸಿದರು.

ವಿನಯ್ ಅವರ ಸಾವಿನಿಂದ ಕೊಡಗಿನ ಜನತೆ ಹಾಗೂ ಶಾಸಕರಿಗೆ ದುಃಖವಾಗಿದೆ. ಅಲ್ಲದೆ, ಇದೇ ಬಿಜೆಪಿಯವರು ಪೊಲೀಸ್ ಅಧಿಕಾರಿ ಗಣಪತಿ ಅವರ ಸಾವಿನಲ್ಲಿ ರಾಜಕೀಯ ಮಾಡಿದರು. ಇದು ಜನರಿಗೆ ಅರ್ಥವಾಯಿತು. ಅದಕ್ಕೆ ಈ ಬಾರಿ ಕೊಡಗಿನಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದಾರೆ. ಇನ್ನೂ, ಪೊನ್ನಣ್ಣ ಅವರ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹಗೆ ಮಾತನಾಡುವ ನೈತಿಕತೆಯಿಲ್ಲ. ಇದೇ ಚಾಳಿಯನ್ನು ಮುಂದುವರೆಸಿದರೆ ಕೆಪಿಸಿಸಿ ಕಾನೂನು ಘಟಕದಿಂದ ಮುಂದಿನ ದಿನಗಳಲ್ಲಿ ಹೋರಾಟವನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ದೀಪಕ್ ತಿಮ್ಮಯ್ಯ, ಕಾನೂನು ಘಟಕದ ಉಪಾಧ್ಯಕ್ಷ ದಿವಾಕರ್, ಬೆಂಗಳೂರು ದಕ್ಷಿಣ ಕಾನೂನು ಘಟಕದ ಅಧ್ಯಕ್ಷ ಆನಂದ್ ಸೇರಿದಂತೆ ಪ್ರಮುಖರಿದ್ದರು.


Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News