ಅಪರೂಪದ ಕಾಯಿಲೆಗೆ ತುತ್ತಾಗುವ ಮಕ್ಕಳ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ : ಡಾ.ಶರಣ ಪ್ರಕಾಶ್ ಪಾಟೀಲ್

Update: 2025-04-06 23:56 IST
ಅಪರೂಪದ ಕಾಯಿಲೆಗೆ ತುತ್ತಾಗುವ ಮಕ್ಕಳ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ : ಡಾ.ಶರಣ ಪ್ರಕಾಶ್ ಪಾಟೀಲ್
  • whatsapp icon

ಬೆಂಗಳೂರು : ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅಪರೂಪದ ಕಾಯಿಲೆಗಳಿಗೆ ತುತ್ತಾದ ನೂರಾರು ಮಕ್ಕಳು ಇದ್ದಾರೆ. ಇವರಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಇಂಥ ಮಕ್ಕಳಿಗೆ ಸೂಕ್ತ ಹಾಗೂ ಸಮರ್ಪಕ ಹಾಗೂ ಪರಿಣಾಮಕಾರಿ ಚಿಕಿತ್ಸೆ ಕೊಡಿಸಲು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂಡಿ ‘ಯೋಜನೆ’ ರೂಪಿಸಲು ರಾಜ್ಯ ಸರಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದಾರೆ. ಲೈಸೊಸಮಲ್ ಸ್ಟೋರೇಜ್ ಡಿಸ್ ಆರ್ಡರ್ ಎಂಬ ಅತ್ಯಂತ ಅಪರೂಪದ ಕಾಯಿಲೆಗೆ ಹಲವಾರು ಮಕ್ಕಳು ತುತ್ತಾಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ ಗೌಷೆ ರೋಗ ಎಂಪಿಎಸ್ (Gaucher), ಪಾಂಪೆ ಎಂಬ ಆನುವಂಶಿಕ ಕಾಯಿಲೆಯೂ ಈ ಗುಂಪಿಗೆ ಸೇರಿವೆ.

ರಾಷ್ಟ್ರೀಯ ಅಪರೂಪ ಕಾಯಿಲೆ ನೀತಿಯಡಿ (ಎನ್‍ಪಿಆರ್‍ಡಿ) ಇಂಥ ರೋಗಕ್ಕೆ ತುತ್ತಾಗಿರುವ ಮಕ್ಕಳಿಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರಕಾರ ಅನುದಾನ ಒದಗಿಸುತ್ತಿದೆ. 2016ರಿಂದ ಕರ್ನಾಟಕದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿಯೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಚಿಕಿತ್ಸಾ ವೆಚ್ಚ ಒಂದು ವರ್ಷಕ್ಕೆ ಕನಿಷ್ಠ 50 ಲಕ್ಷ ರೂಪಾಯಿಗಳಾಗುತ್ತದೆ. ಗರಿಷ್ಠ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಸೆಂಟರ್ ಫಾರ್ ಎಕ್ಸಲೆನ್ಸ್ ಫಾರ್ ರೇರ್ ಡೀಸಿಸ್ ಎಂಬ 13 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪೈಕಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಕೂಡ ಒಂದಾಗಿದೆ. ಇಂದಿರಾಗಾಂಧಿ ಸಂಸ್ಥೆಯಲ್ಲಿ 22 ಮಕ್ಕಳಿಗೆ ಕನಿಷ್ಠ ಮಿತಿಯಾದ 50 ಲಕ್ಷ ರೂ. ಅನುದಾನ ನೀಡಿ ಚಿಕಿತ್ಸೆಯನ್ನು ನೀಡಲಾಗಿದೆ.

ಇದುವರೆಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕರ್ನಾಟಕ ಸರಕಾರದಿಂದ 76 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈಗ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಶರಣ ಪ್ರಕಾಶ್ ಪಾಟೀಲ್, ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಸರಕಾರದ ಜೊತೆಗೆ ಕಾರ್ಪೊರೇಟ್‌ ಕಂಪನಿಗಳು ಕೈ ಜೋಡಿಸಿದರೆ ಈ ಮಕ್ಕಳ ಬಾಳಿನಲ್ಲಿ ಬೆಳಕು ತರಿಸಬಹುದು ಎಂದು ಕ್ರಮಕ್ಕೆ ಮುಂದಾಗಿದ್ದಾರೆ.

ವೈದ್ಯಕೀಯ ವೆಚ್ಚಗಳನ್ನು ಹಂಚಿಕೊಳ್ಳುವ ಭಾಗವಾಗಿ, ಸಂಸ್ಥೆಯಲ್ಲಿ ಇರಿಸಲಾಗಿರುವ ಕಾರ್ಪಸ್ ನಿಧಿಯ ಸ್ವಲ್ಪ ಭಾಗವನ್ನು ವಿನಿಯೋಗಿಸಲು ಐಜಿಐಸಿಎಚ್ ಡಾ.ಕೆ.ಎಸ್. ಸಂಜಯ್ ಅವರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಕೊಡಿಸುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಈಗ ಕಾರ್ಪೊರೇಟ್‌ ಸಂಸ್ಥೆಗಳಿಗೆ ಮನವಿ ಮಾಡಿದೆ. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ಯೋಜನೆಯಡಿ ಕಂಪನಿಗಳು ಅನುದಾನ ನೀಡಲಿ ಅಥವಾ ಮಕ್ಕಳನ್ನು ದತ್ತು ಪಡೆದು ಚಿಕಿತ್ಸಾ ವೆಚ್ಚ ಭರಿಸಲಿ ಎಂದು ಶರಣ ಪ್ರಕಾಶ್ ಪಾಟೀಲ್ ಮನವಿ ಮಾಡಿದ್ದಾರೆ.

ಚಿಕಿತ್ಸಾ ವೆಚ್ಚ ಭರಿಸಲಿ, ದತ್ತು ಪಡೆಯಲಿ

ಲೈಸೊಸಮಲ್ ಸ್ಟೋರೇಜ್ ಡಿಸ್ ಆರ್ಡರ್ ಎಂಬ ಅಪರೂಪದ ಕಾಯಿಲೆ ಚಿಕಿತ್ಸೆಗೆ ತಗಲುವ ವೆಚ್ಚ ವರ್ಷಕ್ಕೆ 20-40 ಲಕ್ಷ ರೂ. ಕರ್ನಾಟಕದಲ್ಲಿ ಈ ರೀತಿಯ 22 ಮಕ್ಕಳಿದ್ದಾರೆ. ಇವರ ಚಿಕಿತ್ಸೆಗಾಗಿ ವಾರ್ಷಿಕ 12-13 ಕೋಟಿ ರೂ. ಅನುದಾನ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಈ ದುಬಾರಿ ಕಾಯಿಲೆಯ ಚಿಕಿತ್ಸೆಗಾಗಿ ದೇಣಿಗೆ ನೀಡುವುದರ ಮೂಲಕ ಒಂದು ಮಗುವನ್ನು ಕಾರ್ಪೊರೇಟ್‌ ಸಂಸ್ಥೆಗಳು ದತ್ತು ತೆಗೆದುಕೊಳ್ಳಲಿ ಎಂದು ಮನವಿ ಮಾಡುತ್ತೇನೆ.

ಡಾ.ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News