ನಿರುದ್ಯೋಗಿಗಳಿಗೆ ವಿಧಾನ ಪರಿಷತ್ ಸ್ಥಾನ ಕೊಟ್ಟಂತೆ ಆಗಬಾರದು: ಡಿ.ಕೆ.ಶಿವಕುಮಾರ್
ಹೊಸದಿಲ್ಲಿ: ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರವಾಗಿ ದನಿ ಎತ್ತುವವರಿಗೆ ವಿಧಾನಪರಿಷತ್ ಸ್ಥಾನ ನೀಡಬೇಕು ಎಂಬುದು ನನ್ನ ಅಭಿಲಾxe. ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಸ್ಥಾನ ಕೊಟ್ಟಂತೆ ಆಗಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಹೊಸದಿಲ್ಲಿಯ ಕರ್ನಾಟಕ ಭವನ-1 ‘ಕಾವೇರಿ’ಯಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಉತ್ತಮವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕು ಎಂಬುದು ನನ್ನ ಪ್ರಾಶಸ್ತ್ಯ. ಇದರ ಬಗ್ಗೆ ಮುಖ್ಯಮಂತ್ರಿ ಹಾಗೂ ನಾನು ಹೈಕಮಾಂಡ್ ಬಳಿ ಮಾತನಾಡಿದ್ದೇವೆ. ಹೈಕಮಾಂಡ್ ಇಬ್ಬರನ್ನು ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು.
ಮೇಕೆದಾಟು ಹಾಗೂ ಭದ್ರಾ ಮೇಲ್ದಂಡೆ ಬಗ್ಗೆ ಪ್ರತಿ ಬಾರಿ ದಿಲ್ಲಿಗೆ ಬಂದಾಗಲೂ ಚರ್ಚೆ ಮಾಡಲಾಗುತ್ತದೆ. ಆದರೆ, ಯಾವುದೆ ಪ್ರಗತಿ ಕಂಡು ಬರುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಮೋದಿ ನಾಯಕತ್ವದ ಕೇಂದ್ರ ಸರಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ಬಜೆಟ್‍ನಲ್ಲಿ ಘೋಷಿಸಿದ್ದರು. ಆದರೆ, ಈವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಸಂಬಂಧ ಈಗಾಗಲೇ ರಾಜ್ಯದಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ಸ್ಥಳ ಗುರುತಿಸುವಿಕೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿದೆ. ದಿಲ್ಲಿಯಲ್ಲೂ ಈ ಬಗ್ಗೆ ಕೆಲಸ ಪ್ರಾರಂಭ ಮಾಡಲಾಗುವುದು ಎಂದು ಅವರು ಹೇಳಿದರು.
ಬೆಲೆಏರಿಕೆ ವಿರುದ್ಧ ಪ್ರತಿಭಟಿಸಿ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರ ಕಾಲದಲ್ಲಿ ಪೆಟ್ರೊಲ್, ಡೀಸೆಲ್, ಅಡುಗೆ ಎಣ್ಣೆಯ ಬೆಲೆ ಏರಿಕೆಯಾದಾಗ ಏಕೆ ಮನೆ ಮುತ್ತಿಗೆ ಮಾಡಿಕೊಳ್ಳಲಿಲ್ಲ? ಎಂದು ತಿರುಗೇಟು ನೀಡಿದರು.
ಪೆಟ್ರೋಲ್ ಬೆಲೆ ಹೆಚ್ಚಳವಾದಾಗ ನಾವು 100 ನಾಟ್ ಔಟ್ ಎನ್ನುವ ಹೋರಾಟ ಮಾಡಿದ್ದೆವು. ಕಬ್ಬಿಣ, ಉಕ್ಕು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಎಲ್ಲವೂ ಹೆಚ್ಚಾಯಿತು. ಕಸದ ಸಂಗ್ರಹ ಶುಲ್ಕಕ್ಕೆ ಆದೇಶ ನೀಡಿದವರೇ ಬಿಜೆಪಿಯವರು. ನಾನು ಅವರು ಮಾಡಿದ ಬೆಲೆಗಿಂತ ಕಡಿಮೆ ಮಾಡಿದ್ದೇನೆ ಎಂದು ಹೇಳಿದರು.
ನಿಯೋಗಕ್ಕೆ ಸಂಸದ ತುಕಾರಾಂ ನೇಮಕ
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹೋರಾಟದ ನಿಯೋಗಕ್ಕೆ ಹೈಕಮಾಂಡ್ ಸೂಚನೆಯಂತೆ ನಮ್ಮ ಕರ್ನಾಟಕದಿಂದ ಸಂಸದ ಈ.ತುಕಾರಾಂ ಅವರನ್ನು ನೇಮಿಸಲಾಗಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿಯನ್ನು ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.