ಎಚ್‌ಡಿಕೆ ಕುಟುಂಬದಿಂದ ಸರಕಾರಿ ಭೂಮಿ ಒತ್ತುವರಿ ಆರೋಪ: ಬಲವಂತ ಕ್ರಮ ತೆಗೆದುಕೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶ ವಿಸ್ತರಣೆ
Update: 2025-04-05 00:08 IST
ಬೆಂಗಳೂರು : ಬಿಡದಿಯ ಕೇತಗಾನಹಳ್ಳಿ ಬಳಿ ಸರಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬುದಾಗಿ ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.
6 ಎಕರೆ ಒತ್ತುವರಿ ಸಂಬಂಧ ಸ್ಥಳೀಯ ತಹಶೀಲ್ದಾರ್ ನೀಡಿರುವ ನೋಟಿಸ್ ಪ್ರಶ್ನಿಸಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್ ಸಂಜಯಗೌಡ ಅವರ ಏಕಸದಸ್ಯ ಪೀಠ ಮಧ್ಯಂತರ ಆದೇಶ ವಿಸ್ತರಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ 1986ರಲ್ಲಿ ಖರೀದಿಸಿದ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂದು ಇದೀಗ ಆಕ್ಷೇಪಿಸುತ್ತಿದ್ದಾರೆ. ಭೂ ಕಂದಾಯ ಕಾಯ್ದೆಯ ತಿದ್ದುಪಡಿಯನ್ನು ಪ್ರಶ್ನಿಸುತ್ತೇವೆ ಎಂದು ಕೋರ್ಟ್ ಗಮನಕ್ಕೆ ತಂದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಎ.8ಕ್ಕೆ ಮುಂದೂಡಿದೆ.