ನಕ್ಸಲ್ ಪ್ರಭಾವಿತ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುವಂತೆ ಶಾಂತಿಗಾಗಿ ನಾಗರೀಕರ ವೇದಿಕೆ ಒತ್ತಾಯ
ಬೆಂಗಳೂರು : ಸರಕಾರ ಮತ್ತು ಪೊಲೀಸ್ ಯಂತ್ರಾಂಗ ಜನರ ಸಮಸ್ಯೆಗಳನ್ನು ಬಗೆಹರಿಸದೆ, ಅವರ ಬದುಕಿನ ಹಕ್ಕನ್ನು ಕಸಿಯಲು ಹೋದರೆ ಜನರು ಸಶಸ್ತ್ರ ಸಂಘರ್ಷದಂತಹ ತಿಕ್ಷ್ಣರೂಪಗಳ ಮೊರೆ ಹೋಗುತ್ತಾರೆ. ಆದುದರಿಂದ ಸರಕಾರ ಮತ್ತು ಪೊಲೀಸ್ ಯಂತ್ರಾಂಗ ನಕ್ಸಲ್ ಪ್ರಭಾವಿತ ಪ್ರದೇಶದ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ಎಂದು ಶಾಂತಿಗಾಗಿ ನಾಗರೀಕರ ವೇದಿಕೆ ಒತ್ತಾಯಿಸಿದೆ.
ಮಂಗಳವಾರ ಈ ಸಂಬಂಧ ವೇದಿಕೆಯ ಪ್ರೊ.ನಗರಗೆರೆ ರಮೇಶ್, ಪ್ರೊ.ವಿ.ಎಸ್.ಶ್ರೀಧರ್, ತಾರಾರಾವ್ ಪತ್ರಿಕಾ ಹೇಳಿಕೆ ನೀಡಿದ್ದು, ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ಕರೆತರುವ ಕಾರ್ಯಾಚರಣೆ ಮೂಲಕ ರಾಜ್ಯ ಇಡೀ ದೇಶಕ್ಕೆ ಒಂದು ಶಾಂತಿಯುತ ಹಾಗೂ ಪ್ರಜಾತಾಂತ್ರಿಕ ಮಾದರಿಯನ್ನು ಕಟ್ಟಿಕೊಟ್ಟಿದೆ. ನ್ಯಾಷನಲ್ ಪಾರ್ಕ್ ವಿಚಾರದಂತಹ ವಿದ್ಯಮಾನಗಳು ಮತ್ತೆ ಮರುಕಳಿಸಬಾರದೆಂದರೆ ಜನಪರ ಎಂದು ಕರೆದುಕೊಳ್ಳುವ ಸರಕಾರಗಳು ಜನರನ್ನು ಮೂಲೆಗೊತ್ತದೆ ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವುದೆಂದರೆ ಅವರನ್ನು ಕಾಡಿನಿಂದ ಜೈಲಿಗೆ ಕರೆತರುವುದಷ್ಟೇ ಅಲ್ಲ, ಸಮಾಜದಲ್ಲಿ ಅವರು ಗೌರವಾನ್ವಿತವಾಗಿ ಬದುಕಲು ಬೇಕಾದ ಎಲ್ಲ ಸೌಕರ್ಯವನ್ನೂ ಒದಗಿಸಿ ನಾಡಿಗೆ ಕರೆತರುವುದು ಕೂಡ. ಇದು ಪ್ರಜಾತಂತ್ರ ಸರಕಾರದ ಕರ್ತವ್ಯ ಹಾಗೂ ಅದು ಜಾರಿಯಾಗುವ ಹಾಗೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರಕಾರ ಕೆಲವು ಸ್ವಾಗತಾರ್ಹ ಹೆಜ್ಜೆಗಳನ್ನು ಇಟ್ಟಿದೆ. ಆದರೂ, ಇನ್ನೂ ಹಲವಾರು ಕೆಲಸಗಳು ಆಗಬೇಕಿದೆ.
ವಿಶೇಷ ನ್ಯಾಯಾಲಯ ಕೂಡಲೇ ಕಾರ್ಯರೂಪಕ್ಕೆ ಬಂದು, ಕನಿಷ್ಟ ಎಲ್ಲರೂ ಬೇಲ್ ಮೇಲೆ ಹೊರ ಬರುವಂತಾಗಬೇಕು. ಅಗತ್ಯ ಕಾನೂನು ಮತ್ತು ವೈದ್ಯಕೀಯ ನೆರವು ಒದಗಿಸಬೇಕು. ಸಾರಾಂಶದಲ್ಲಿ ಹೇಳಬೇಕೆಂದರೆ ಆಗಿರುವ ಕೆಲಸ ಅಭಿನಂದನಾರ್ಹವಾದದ್ದೇ ಆದರೂ ಆಗಬೇಕಿರುವ ಕೆಲಸಗಳು ಸಾಕಷ್ಟು ಇವೆ. ಇವುಗಳನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ತುರ್ತಿನ ಮೇಲೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.