ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ : ಪ್ರಿಯಾಂಕ್ ಖರ್ಗೆ

Update: 2025-04-01 21:57 IST
ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ : ಪ್ರಿಯಾಂಕ್ ಖರ್ಗೆ
  • whatsapp icon

ಬೆಂಗಳೂರು : ಕೊನೆಗೂ ಬಿಜೆಪಿಯವರು ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಮನಸ್ಸು ಮಾಡಿದ್ದು ಉತ್ತಮ ಬೆಳವಣಿಗೆ. ಬಿಜೆಪಿಯವರು ಅಸಲಿಗೆ ಪ್ರತಿಭಟನೆ ನಡೆಸಬೇಕಿರುವುದು ಕೇಂದ್ರ ಸರಕಾರದ ವಿರುದ್ಧ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ ಅವರು, ಒಂದು ವರ್ಷದಲ್ಲಿ ಒಂದು ಸಾಮಾನ್ಯ ಸಸ್ಯಾಹಾರಿ ಊಟದ ಬೆಲೆ ಶೇ.57ರಷ್ಟು ದುಬಾರಿಯಾಗಿದೆ. ತರಕಾರಿ ಹಾಗೂ ಬೇಳೆ ಕಾಳುಗಳು ಸೇರಿದಂತೆ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆಗಳು ಒಂದೂವರೆ ಪಟ್ಟು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ಪ್ರಸ್ತುತ ಕಚ್ಚಾ ತೈಲದ ಬೆಲೆ ಶೇ.34 ಇಳಿಕೆಯಾಗಿದೆ. ಆದರೆ ದೇಶದ ನಾಗರಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ದುಬಾರಿ ಸುಂಕ, ತೆರಿಗೆಗಳನ್ನು ವಿಧಿಸಿ 36.58 ಲಕ್ಷ ಕೋಟಿ ರೂ. ವನ್ನು ಕೇಂದ್ರ ಸರಕಾರ ಸಂಗ್ರಹಿಸಿದೆ. ಆರೋಗ್ಯ ಕ್ಷೇತ್ರದ ಹಣದುಬ್ಬರ ಶೇ.14 ಹೆಚ್ಚಿದೆ, ಸಾಮಾನ್ಯ ಔಷಧಗಳ ಬೆಲೆಯೂ ಅಧಿಕವಾಗಿ ಹೆಚ್ಚಳವಾಗಿದೆ. ಜೀವ ವಿಮೆ, ಆರೋಗ್ಯ ವಿಮೆಗಳ ಮೇಲೂ ಶೇ.18 ಜಿಎಸ್‍ಟಿ ಹೇರಲಾಗಿದೆ. ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್‍ಟಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಪ್ರಿಲ್‍ನಿಂದ ಎಟಿಎಂ ಶುಲ್ಕಗಳನ್ನೂ ಏರಿಸುತ್ತಿದೆ ಕೇಂದ್ರ ಸರಕಾರ. 2018ರಿಂದ 2024ರವರೆಗೆ ಕನಿಷ್ಠ ಠೇವಣಿ ನಿರ್ವಹಿಸದ ದಂಡವಾಗಿ ಬಡ ಜನರಿಂದ 43,500 ಕೋಟಿ ರೂ. ಹಣ ಲೂಟಿಗೈದಿದೆ. ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಶೇ.70 ರಿಂದ ಶೇ.80ನಷ್ಟು ದುಪ್ಪಟಾಗಿವೆ ಎಂದು ಹೇಳಿದ್ದಾರೆ.

100 ಕೋಟಿಗೂ ಅಧಿಕ ಭಾರತೀಯರಿಗೆ ಅಗತ್ಯ ಸೇವೆಗಳಿಗೆ ಖರ್ಚು ಮಾಡಲಾಗದಷ್ಟು ಖರೀದಿ ಸಾಮಥ್ರ್ಯ ಕುಸಿದಿದೆ ಎಂದು ಬ್ಲೂಮ್ ವರದಿ ಮಾಡಿದೆ. ಟೋಲ್ ದರ ಏರಿಕೆಯು ಭಾರತೀಯರನ್ನು ಕಂಗಾಲಾಗಿಸಿದೆ. ಗ್ಯಾಸ್ ಸಿಲಿಂಡರ್ ದರ ಜನರನ್ನು ಒಲೆ ಹಚ್ಚದೆಯೇ ಸುಡುತ್ತಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಕಳಪೆ ಆರ್ಥಿಕ ನೀತಿಯಿಂದಾಗಿ ಹಣದುಬ್ಬರವು ಗಣನೀಯ ಏರಿಕೆಯಾಗಿದೆ, ಇದಕ್ಕೆ ಸರಿ ಹೊಂದಿಸಲು ಅನಿವಾರ್ಯವಾಗಿ ನಮ್ಮ ಸರಕಾರ ಕೆಲವೊಂದಿಷ್ಟು ಬೆಲೆಗಳನ್ನು ಪರಿಷ್ಕರಿಸಿದೆ. ಆದರೆ ಅದಕ್ಕೆ ಮೂಲ ಕಾರಣ ಕೇಂದ್ರ ಸರಕಾರ. ಬಿಜೆಪಿ ನಾಯಕರು ಜನರ ಎದೆಗೆ ಕಿವಿಗೊಟ್ಟರೆ ಆ ಆಕ್ರೋಶ ಕೇಳಿಸಲಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News