ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ | ಇಸ್ರೇಲ್‌ನೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರ ಸ್ಥಗಿತಗೊಳಿಸುವಂತೆ ಬೆಂಗಳೂರು ಫಾರ್ ಜಸ್ಟೀಸ್ ಆಂಡ್ ಪೀಸ್ ಆಗ್ರಹ

Update: 2025-04-04 00:05 IST
ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ | ಇಸ್ರೇಲ್‌ನೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರ ಸ್ಥಗಿತಗೊಳಿಸುವಂತೆ ಬೆಂಗಳೂರು ಫಾರ್ ಜಸ್ಟೀಸ್ ಆಂಡ್ ಪೀಸ್ ಆಗ್ರಹ
  • whatsapp icon

ಬೆಂಗಳೂರು : ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಭಾರತ ಈ ಘಟನೆಗೆ ಸರಿಯಾದ ಪ್ರತಿಕ್ರಿಯೆ ನೀಡದೆ ನಿರ್ಲಕ್ಷಿಸುತ್ತಿದೆ. ಈ ಕೂಡಲೇ ಇಸ್ರೇಲ್‌ನೊಂದಿಗೆ ಎಲ್ಲ ಶಸ್ತ್ರಾಸ್ತ್ರ ವ್ಯಾಪಾರವನ್ನು ತಕ್ಷಣ ಸ್ಥಗಿತಗೊಳಿಸಿ ಮತ್ತು ಎಲ್ಲ ರಾಜತಾಂತ್ರಿಕ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿತಗೊಳಿಸಬೇಕು ಎಂದು ಬೆಂಗಳೂರು ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ಸಂಘಟನೆ ಆಗ್ರಹಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕಿ ಐಶ್ವರ್ಯಾ, ಇಸ್ರೇಲ್ ಕದನ ವಿರಾಮಕ್ಕೆ ಸಹಿ ಹಾಕಿದ ದಿನವೇ ವೆಸ್ಟ್ ಬ್ಯಾಂಕ್‌ನಲ್ಲಿ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸುವ ಹತ್ಯಾಕಾಂಡವನ್ನು ಪ್ರಾರಂಭಿಸುತ್ತಾ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿತು. ಒಂದು ವಾರದ ಕಾಲ ನಡೆದ ಬಾಂಬ್ ದಾಳಿಗಳು, ಹತ್ಯೆಗಳ ಪರಿಣಾಮವಾಗಿ 40 ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕದನ ವಿರಾಮ ಒಪ್ಪಂದದ ಬಳಿಕ ಗಾಝಾ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳ ಮೇಲೆ ಸಣ್ಣ ಹಂತದಲ್ಲಿ ನಿರಂತರ ದಾಳಿಗಳನ್ನು ನಡೆಸುವುದರ ಮೂಲಕ, ಇಸ್ರೇಲ್ 155 ಫೆಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೇಲ್ ಮುತ್ತಿಗೆ ಹಾಕಿದ ಎಲ್ಲ ಪ್ರದೇಶಗಳಿಗೆ ನೆರವು, ಆಹಾರ, ನೀರು ಸರಬರಾಜು ಮತ್ತು ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿ ತಗೊಳಿಸಿದೆ. ಇದರಿಂದ ಅಲ್ಲಿನ ಸ್ಥಳೀಯರು ಆಹಾರ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಹಿಂಸೆಗೊಳಗಾಗಿದ್ದಾರೆ. ಭಾರತೀಯ ಸಂಸತ್ತಿನಲ್ಲಿ ಠರಾವನ್ನು ಅಂಗೀಕರಿಸಬೇಕು. ಇಸ್ರೇಲ್‌ನ ಇತ್ತೀಚಿನ ದಾಳಿಗಳನ್ನು ಮತ್ತು ಕದನ ವಿರಾಮ ಒಪ್ಪಂದದ ಉಲ್ಲಂಘನೆಯನ್ನು ಖಂಡಿಸಬೇಕು. ಫೆಲೆಸ್ತೀನ್ ಜನತೆಯೊಂದಿಗೆ ಏಕಾತ್ಮತೆ ವ್ಯಕ್ತಪಡಿಸಬೇಕು ಮತ್ತು ಮಾನವ ಹಕ್ಕುಗಳು ಹಾಗೂ ಅಂತರ್‌ರಾಷ್ಟ್ರೀಯ ಕಾನೂನಿನ ಬದ್ಧತೆಯನ್ನು ಪುನರುಚ್ಚರಿಸಬೇಕು ಎಂದು ಅವರು ಒತ್ತಾಯಿಸಿದರು.

ಫೆಲೆಸ್ತೀನ್ ಕುರಿತು ಜನರಿಗೆ ಅರಿವು ನೀಡಲು ಹಾಗೂ ಇಸ್ರೇಲ್ ಆಡಳಿತದ ವಿರುದ್ಧ ಪ್ರತಿಭಟಿಸಲು ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಸದೆಬಡಿಯುವ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಯದ್ಧದಾಹಿ ಇಸ್ರೇಲ್‌ಗೆ ಭಾರತದಿಂದ ಒಂದು ಲಕ್ಷ ಕಾರ್ಮಿಕರನ್ನು ಯಾವುದೇ ಸುರಕ್ಷತೆ ಇಲ್ಲದೆ, ನಿರ್ಮಾಣ ಕ್ಷೇತ್ರಕ್ಕೆ ಕಳುಹಿಸುವ ಕೇಂದ್ರ ಸರಕಾರದ ತೀರ್ಮಾನ ರದ್ದು ಮಾಡಬೇಕು. ಈಗಾಗಲೇ ಕಳುಹಿಸಲಾದ 5 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಆರ್ಥಿಕ ಹಾಗೂ ಜೀವ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕು ಎಂದು ಐಶ್ವರ್ಯ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಕೆ.ಎಸ್.ವಿಮಲಾ, ಕೆ.ವಿ.ಭಟ್, ಮಹಾಂತೇಶ್, ಸೂರ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News