ಶಾಲೆಗಳ 2025-26ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

Update: 2025-04-03 21:42 IST
ಶಾಲೆಗಳ 2025-26ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
  • whatsapp icon

ಬೆಂಗಳೂರು : ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ 2025-26ನೆ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ಎ.11ರಿಂದ ಬೇಸಿಗೆ ರಜೆ ಆರಂಭವಾಗಲಿದೆ. ಮೇ 25ರಿಂದ ಶಾಲೆಗಳು ಪುನಾರಾರಂಭಗೊಳ್ಳಲಿವೆ. ಶೈಕ್ಷಣಿಕ ವೇಳಾಪಟ್ಟಿಯು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನ್ವಯವಾಗಲಿದೆ.

2025-26ನೆ ಸಾಲಿನ ಶಾಲಾ ಕರ್ತವ್ಯದ ದಿನಗಳ ಮೊದಲನೆ ಅವಧಿಯು ಮೇ 29ರಿಂದ ಸೆ.19ರವರೆಗೆ ಇರಲಿದೆ. ದಸರಾ ರಜೆ ಸೆ.20ರಿಂದ ಅ.7ರವರೆಗೆ ಇರುತ್ತದೆ. ಶಾಲಾ ಕರ್ತವ್ಯದ ದಿನಗಳ ಎರಡನೆ ಅವಧಿಯು ಅ.8ರಿಂದ 2026ರ ಎ.10ರವರೆಗೆ ಇರಲಿದೆ. ಬೇಸಿಗೆ ರಜೆಯು ಎ.11ರಿಂದ ಎ.28ರವರೆಗೆ ಇರುತ್ತದೆ. ಎ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

2025-26ನೆ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 242 ದಿನಗಳ ಕಾಲ ಶಾಲೆಗಳು ಕರ್ತವ್ಯ ನಿರ್ವಹಿಸಲಿವೆ. ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ 26 ದಿನಗಳನ್ನು ಮೀಸಲಿಡಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 22ದಿನಗಳು, ಮೌಲ್ಯಮಾಪನಾ ಮತ್ತು ಫಲಿತಾಂಶ ವಿಶ್ಲೇಷಣೆಗೆ 10 ದಿನಗಳು, ಶಾಲಾ ಸ್ಥಳೀಯ ರಜೆಗಳು 4 ದಿನಗಳ ಕಾಲ ಇರಲಿದೆ. ಬೋಧನಾ-ಕಲಿಕಾ ಪ್ರಕ್ರಿಯೆಗೆ 178 ದಿನಗಳು ಉಳಿಯಲಿವೆ.

5, 8 ಮತ್ತು 9ನೆ ತರಗತಿಯ ಎಸ್‍ಎ-2 ಮೌಲ್ಯಾಂಕನ ಸೇರಿದಂತೆ ಉಳಿದ 1 ರಿಂದ 9ನೆ ತರಗತಿಗಳ ಫಲಿತಾಂಶವನ್ನು ನಿಯಮಾನುಸಾರ ವಿಶ್ಲೇಷಿಸಿ, ನಿಗದಿಪಡಿಸಿದಂತೆ ಎ.8ರಂದು ಪ್ರಾಥಮಿಕ ಶಾಲಾ ಹಂತದಲ್ಲಿ ಹಾಗೂ ಎ.9ರಂದು ಪ್ರೌಢಶಾಲಾ ಹಂತದಲ್ಲಿ ಎರಡನೆ ಸಮುದಾಯ ದತ್ತ ಶಾಲೆ/pOಷಕರ ಸಭೆ ಕರೆದು ಪ್ರಕಟಿಸಬೇಕು.

ಎ.11ರಿಂದ ಎ.28ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾಗಿದೆ. ಆದ್ದರಿಂದ ಶಾಲಾ ಮುಖ್ಯಸ್ಥರು ಶಾಲಾ ದಾಸ್ತಾನು ಮತ್ತು ದಾಖಲೆಗಳನ್ನು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ರಜಾ ಅವಧಿಯಲ್ಲಿ ಬರಪೀಡಿತ ತಾಲ್ಲೂಕುಗಳ ಮಕ್ಕಳಿಗೆ ಬಿಸಿಯೂಟ ನೀಡುವ ಕುರಿತು ನಿರ್ದೇಶನಾಲಯದಿಂದ ನೀಡುವ ಸೂಚನೆಗಳಂತೆ ಕ್ರಮವಹಿಸಬೇಕು. ಒಂದು ವೇಳೆ ಈ ಅವಧಿಯಲ್ಲಿ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕೇಂದ್ರಗಳನ್ನಾಗಿ ಶಾಲೆಗಳನ್ನು ಬಳಸಲು ಸಂಬಂಧಿಸಿದ ಪ್ರಾಧಿಕಾರ ಕೋರಿದ್ದಲ್ಲಿ ಸಹಕರಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಕ್ರಿಸ್‍ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರಿಗೆ(ಆಡಳಿತ) ಸಲ್ಲಿಸಿದಲ್ಲಿ, ಅದರ ಬಗ್ಗೆ ಆಯಾ ಉಪನಿರ್ದೇಶಕರು(ಆಡಳಿತ) ಪರಿಶೀಲಿಸಿ ನಿರ್ಧರಿಸಬೇಕು. ಡಿಸೆಂಬರ್‍ನಲ್ಲಿ ನೀಡುವ ಕ್ರಿಸ್ ಮಸ್ ರಜಾ ಅವಧಿಯನ್ನು ಅಕ್ಟೋಬರ್‍ನ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News