ಬಿಜೆಪಿಯಲ್ಲಿ ಬಿಎಸ್‌ವೈ ಕುಟುಂಬ ಮುಂದುವರೆದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ: ಯತ್ನಾಳ್
ಬೆಂಗಳೂರು : ʼಬಿಜೆಪಿಯಲ್ಲಿ ಈ ಕೆಟ್ಟ ಯಡಿಯೂರಪ್ಪ ಕುಟುಂಬ ಮುಂದುವರೆದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯ ಇದೆʼ ಎಂದು ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಹೊಸ ಪಕ್ಷ ಕಟ್ಟುವ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಹೇಳಿದ್ರು ಹೊಸ ಪಕ್ಷ ಕಟ್ಟುತ್ತೇವೆ ಎಂದು? ನಾವು ಮೊದಲು ಸರ್ವೇ ಮಾಡುತ್ತೇವೆ. ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬ ಮುಂದುವರೆದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.
ಮಗನ ಕುರ್ಚಿ ಗಟ್ಟಿ ಪ್ರಯತ್ನ: ಯಡಿಯೂರಪ್ಪನವರು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ, ಯತ್ನಾಳ್ ಅವರನ್ನು ಹೊರಗಡೆ ಹಾಕಲಿಲ್ಲ ಎಂದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೆದರಿಸಿ ನನ್ನನ್ನು ಉಚ್ಚಾಟನೆ ಮಾಡಿಸಿದರು. ಮಗನ ಕುರ್ಚಿ ಗಟ್ಟಿ ಮಾಡುವ ಪ್ರಯತ್ನ ಯಡಿಯೂರಪ್ಪ ಅವರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಆಹೋರಾತ್ರಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಅವರು ತಾವು ಸಾಯುವುದಕ್ಕೂ ಮುನ್ನ ವಿಜಯೇಂದ್ರರನ್ನು ಮುಖ್ಯಮಂತ್ರಿಯಾಗಿ ನೋಡಬೇಕು. ಇನ್ನಷ್ಟು ಲೂಟಿ ಮಾಡಬೇಕು ಅನ್ನುವ ಆಸೆ ಅವರದ್ದು. ಇದಕ್ಕಾಗಿ ಹೊರಗಡೆ ಬಂದು ಹೋರಾಟಕ್ಕೆ ಇಳಿದಿದ್ದಾರೆ. ಅಷ್ಟೇ ಹೊರತು ಬಡವರ ಪರವಾಗಲಿ, ರೈತರ ಪರವಾಗಲಿ ಅಲ್ಲ ಎಂದು ಟೀಕಿಸಿದರು.