ಸೊರಬ: ಗುದ್ದಲಿ-ಪಿಕಾಸಿ ಹಿಡಿದು ಶ್ರಮದಾನ ಮಾಡಿದ ಸಚಿವ ಮಧು ಬಂಗಾರಪ್ಪ!

Update: 2025-04-07 15:56 IST
ಸೊರಬ: ಗುದ್ದಲಿ-ಪಿಕಾಸಿ ಹಿಡಿದು ಶ್ರಮದಾನ ಮಾಡಿದ ಸಚಿವ ಮಧು ಬಂಗಾರಪ್ಪ!
  • whatsapp icon

ಶಿವಮೊಗ್ಗ: ಉದ್ಯೋಗ ಖಾತರಿ ( ನರೇಗಾ) ಯೋಜನೆಯಡಿ ಸೊರಬ ತಾಲೂಕಿನ ಹುರುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ಮತ್ತು ಶ್ರಮದಾನ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸೋಮವಾರ ಚಾಲನೆ ನೀಡಿದರು.

 

ಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ ಶಿಕ್ಷಣ ಸಚಿವರು ಕೂಡಾ ಶ್ರಮದಾನ ನಡೆಸಿರುವುದು ವಿಶೇಷವಾಗಿತ್ತು. ಬಿರು ಬಿಸಿಲಿನಲ್ಲಿ ತಲೆಗೆ ಟವೆಲ್ ಕಟ್ಟಿಕೊಂಡ ಸಚಿವರು, ಪಿಕಾಸಿ, ಗುದ್ದಲಿ ಹಿಡಿದು ಕಾಂಪೌಂಡ್ ನಿರ್ಮಾಣ ಕಾಮಗಾರಿಯ ಗುಂಡಿ ಅಗೆದರು. ಗುದ್ದಲಿಯಿಂದ ಬುಟ್ಟಿಗೆ ಮಣ್ಣು ತುಂಬಿ, ಬೇರೆಡೆ ಹೊತ್ತು ಸುರಿದರು. ಬೆಳಗ್ಗೆ 10 ಗಂಟೆಗೆ ಕಾಮಗಾರಿ ಆರಂಭಿಸಿ, ಸತತ ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು, ಶ್ರಮದಾನದಲ್ಲಿ ತೊಡಗಿದ್ದರು.

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಗ್ರಾಮಗಳ ಚಿತ್ರಣವನ್ನೇ ಬದಲಿಸಬಹುದು. ಈ ರೀತಿಯ ಕಾರ್ಯಕ್ರಮಗಳು ದೇಶಕ್ಕೇ ಮಾದರಿಯಾಗಬೇಕು. ಇದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ನನ್ನ ಇಲಾಖೆಗೆ ಹೆಚ್ಚಿನ ಹಣ ನೀಡಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕಾಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಶಾಲೆಯ ಆಸ್ತಿ ಕೂಡ ಸಂರಕ್ಷಣೆಯಾಗುತ್ತದೆ ಎಂದರು.

ಇದೇ ವೇಳೆ ಮಾತನಾಡಿದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಸಚಿವ ಮಧು ಬಂಗಾರಪ್ಪ ಕರೆಯ ಮೇರೆಗೆ ಸೊರಬಕ್ಕೆ ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದೇನೆ. ಸರ್ಕಾರಿ ಶಾಲೆಯ ಕಾಂಪೌಂಡ್ ಅಭಿವೃದ್ಧಿಗೆ ಶ್ರಮದಾನ ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯ ನರೇಗಾ ಅಡಿ ಮಾಡಲಾಗುತ್ತಿದೆ. ನರೇಗಾ ಅಡಿ ಶಾಲೆ ಕೆಲಸ ಮಾಡಿ ರಾಜ್ಯಕ್ಕೆ ಶಿಕ್ಷಣ ಸಚಿವರು ಮಾದರಿಯಾಗಿದ್ದಾರೆ ಎಂದರು.

ಶ್ರಮದಾನ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮಸ್ಥರ ಆರೋಗ್ಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿತ್ತು.

ಸಚಿವರಿಗೆ ಸಾಥ್: ಸಾರ್ವಜನಿಕರ ಪ್ರಶಂಸೆ

ಶಾಲೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವರೆ ಗುದ್ದಲಿ, ಪಿಕಾಸಿ ಹಿಡಿದು, ಮಣ್ಣು ಹೊತ್ತು ಹಾಕಿ ಕೂಲಿ ಕಾರ್ಮಿಕನಂತೆ ಕೆಲಸ ಆರಂಭಿಸುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಕೂಡ ಶ್ರಮದಾನ ಮಾಡಿದರು. ಕಾಂಪೌಂಡ್ ನಿರ್ಮಾಣಕ್ಕೆ ಮಣ್ಣು ಹೊತ್ತು ಹಾಕಿದರು. ಜಿಲ್ಲಾ, ತಾಲೂಕು ಮಟ್ಟದ ಮುಖಂಡರು, ಕಾರ್ಯಕರ್ತರು ಸಚಿವರ ಜೊತೆಗೆ ಕೂಲಿ ಕೆಲಸ ಮಾಡಿದರು. ಸಚಿವ ಮಧು ಬಂಗಾರಪ್ಪ ಶ್ರಮದಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಶಾಸಕಿ ಬಲ್ಕಿಸ್ ಬಾನು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ,ಪ್ರಮುಖರಾದ ಜಿ.ಡಿ ಮಂಜುನಾಥ್, ದರ್ಶನ್ ಉಳ್ಳಿ ಹಾಗೂ ಮಹಿಳಾ ಮುಖಂಡರಾದ ಅನಿತಾ ಕುಮಾರಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಸಚಿವರಿಗೆ ಸಾಥ್ ನೀಡಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News