ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ: ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ‘ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಗ್ಯಾರಂಟಿ ಯೋಜನೆ ನೀಡಿ ಪ್ರಚಾರ ಪಡೆದ ಸರ್ಕಾರ ಒಂದು ಕೈಯಲ್ಲಿ ಫಲ ನೀಡಿ, ಹತ್ತು ಕೈಯಲ್ಲಿ ಜನರಿಂದ ಕಸಿಯುತ್ತಿದೆ. ಇದು ನುಡಿದಂತೆ ನಡೆದ ಸರ್ಕಾರ ಅಲ್ಲ, ಎಡವಿ ಬಿದ್ದ ಸರ್ಕಾರ’ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕ ವತಿಯಿಂದ ಇಲ್ಲಿನ ಟಿ.ಸೀನಪ್ಪ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಕ್ರೋಶ ಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಜನ ಸಾಮಾನ್ಯರ ಮೇಲೆ ಹೊರೆಯಾಗುವಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮೋದಿ ವಿರುದ್ಧವಾಗಿ ಟೀಕಿಸುತ್ತಿದ್ದಾರೆ. ಜನ ವಿರೋಧಿ ನೀತಿಯನ್ನು ಜಾರಿಗೆ ತಂದು ಬಡವರು, ಕೂಲಿ ಕಾರ್ಮಿಕರ ತಲೆಯ ಮೇಲೆ ಹೊರೆ ಹೊರೆಸುತ್ತಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತೊಗೆಯಬೇಕು’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಣ ನುಂಗಿ ಗ್ಯಾರೆಂಟಿ ಯೋಜನೆಗಳ ಅಮಲಿನಲ್ಲಿ ಕಾಂಗ್ರೆಸ್ ತೇಲುತ್ತಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ತುಂಬಿಸಲು ಹಾಲು, ವಿದ್ಯುತ್, ಬಸ್ ಪ್ರಯಾಣ ಹಾಗೂ ವಿವಿಧ ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರ ಜನ ಸಾಮಾನ್ಯರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ದೂರಿದರು.
ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದು ಹೇಳಿದರು.
ಸಂಸದರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜಗದೀಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಎಸ್.ರುದ್ರೇಗೌಡ, ಟಿ.ಡಿ.ಮೇಘರಾಜ್, ಸಿದ್ದರಾಮಣ್ಣ ಇದ್ದರು.
ಅರೆಬೆಂದ ಕಾಂತರಾಜ ಆಯೋಗ ವರದಿ: ವಿಜಯೇಂದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲು ಹೊರಟಿರುವ ಕಾಂತರಾಜ ಆಯೋಗ ವರದಿಯು ಅರೆಬೆಂದ ಸಮೀಕ್ಷಾ ವರದಿ. ಸರ್ಕಾರದ ದುರಾಡಳಿತದ ಚರ್ಚೆ ಮುನ್ನೆಲೆಗೆ ಬಂದಾಗೆಲ್ಲ ಜಾತಿ ಜನಗಣತಿ ವರದಿ ವಿಚಾರವನ್ನು ಸಿದ್ದರಾಮಯ್ಯ ಮುಂದಿಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಜನಸಾಮಾನ್ಯರು ದಿನನಿತ್ಯ ಬಳಸುವ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಹಾಲು, ತೈಲ ಬೆಲೆಯನ್ನೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಟ್ಟಿಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಮಳೆ ಅಡ್ಡಿ:
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಾಕ್ರೋಶ ಯಾತ್ರೆಗೆ ಮಳೆ ಅಡ್ಡಿಪಡಿಸಿತು. ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಗೋಪಿವೃತ್ತದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ಗಳು ಧರೆಗೆ ಉರುಳಿವೆ.
ಸುರಿಯುವ ಮಳೆಯ ನಡುವೆಯೂ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.


