ಹಿಂದುಳಿದ ಆಯೋಗದ ಸಮೀಕ್ಷೆ ವೈಜ್ಞಾನಿಕವಾದದ್ದು, ಮನೆ ಮನೆಗೆ ತೆರಳಿ ಗಣತಿ ಮಾಡಲಾಗಿದೆ : ಕಾಂತರಾಜು

Update: 2025-04-13 09:45 IST
ಹಿಂದುಳಿದ ಆಯೋಗದ ಸಮೀಕ್ಷೆ ವೈಜ್ಞಾನಿಕವಾದದ್ದು, ಮನೆ ಮನೆಗೆ ತೆರಳಿ ಗಣತಿ ಮಾಡಲಾಗಿದೆ : ಕಾಂತರಾಜು
  • whatsapp icon

ಶಿವಮೊಗ್ಗ: ರಾಜ್ಯದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ತಮ್ಮದೇ ಅಧ್ಯಕ್ಷತೆಯಲ್ಲಿ ತಯಾರಿಸಿ, ಸರಕಾರಕ್ಕೆ ಸಲ್ಲಿಸಿರುವ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕ ಎನ್ನುವ ಟೀಕೆಗಳನ್ನು ಆಯೋಗದ ಮಾಜಿ ಅಧ್ಯಕ್ಷ ಎಚ್‌. ಕಾಂತರಾಜು ಅಲ್ಲಗಳೆದಿದ್ದು, ಈ ವರದಿಯನ್ನು ಸರಕಾರ ಕಾರ್ಯರೂಪಕ್ಕೆ ತರಲೇಬೇಕು ಎಂದು ಒತ್ತಾಯಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1931ರ ನಂತರ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಯಾವುದೇ ಸಮೀಕ್ಷೆ ನಡೆದಿಲ್ಲ. ಹಾಗಾಗಿ 2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಆಯೋಗ ರಚಿಸಿದ್ದರು. ಆ ನಿಟ್ಟಿನಲ್ಲಿ ಆಯೋಗವು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿತ್ತು. ಈಗ ಅದರ ಬಗ್ಗೆ ಚರ್ಚೆ ಶುರುವಾಗಿದೆ. ಸಚಿವ ಸಂಪುಟದಲ್ಲಿ ಮಂಡನೆಯಾಗಿದೆ. ವರದಿಗೆ ಮಹತ್ವ ಬಂದಿದೆ ಎಂದರು.

ನಮ್ಮ ದೇಶದಲ್ಲಿ ಜಾತಿ ಎಂಬುದು ವಾಸ್ತವವಾಗಿದೆ.ಆದರೆ ಜಾತಿ, ಭೇದ ತೊಲಗುವುದು ಅಷ್ಟೇ ಮುಖ್ಯವಾಗಿದೆ. ಜಾತಿ ವ್ಯವಸ್ಥೆ ಈ ದೇಶದಿಂದಲೇ ತೊಲಗಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಜಾತಿಗಳಿಂದ ವಿಭಜನೆಯಾಗಿದ್ದೇವೆ, ಅದು ಕೃತಕವಾಗಿದೆ. ನಾವು ನೀಡಿದ ವರದಿಯ 54 ಅಂಶಗಳಲ್ಲಿ ಜಾತಿ ಅಂಶ ಕೂಡ ಇದೆ. ಸರ್ವೋಚ್ಚ ನ್ಯಾಯಾಲಯವೂ ಜಾತಿ ಆಧಾರದ ಮೇಲೆ ವರದಿ ನೀಡಬಾರದೆಂಬ ಸಮೀಕ್ಷೆಗೆ ಒತ್ತು ನೀಡಿದೆ. ಜಾತಿ ಆಧಾರದ ಮೇರೆಗೆ ವರ್ಗೀಕರಿಸಲಾಗಿದೆ. ಪ್ರಶ್ನಾವಳಿಗಳನ್ನು ಮಾಡಿ ಸಮೀಕ್ಷೆ ಮಾಡಿದ್ದೇವೆ ಎಂದು ಸಮೀಕ್ಷೆಯ ಬಗ್ಗೆ ವಿವರಿಸಿದರು.

ಹಿಂದುಳಿದ ಆಯೋಗದ ಸಮೀಕ್ಷೆ ವೈಜ್ಞಾನಿಕವಾದದ್ದೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಚ್. ಕಾಂತರಾಜ್, ಸಮೀಕ್ಷೆ ವೈಜ್ಞಾನಿಕವಾಗಿದೆ ಮತ್ತು ಮನೆ ಮನೆಗೆ ತೆರಳಿ ಗಣತಿ ಮಾಡಲಾಗಿ ದೆ. ಸುಪ್ರೀಂ ನಿರ್ದೇಶನದ ಅಂಶದ ಮೇಲೆ ಗಣತಿ ನಡೆದಿದೆ. ನಾವು ನಡೆಸಿದ ಗಣತಿಗೆ ಪರ್ಯಾಯವಾದ ಸರ್ವೇಗಳಿಲ್ಲ. ವರದಿ ಸೋರಿಕೆಯಾಗಿಲ್ಲ. ಆದರೆ ಮಾಧ್ಯಮಗಳಲ್ಲಿ ಬರುವ ಅಂಕಿ ಅಂಶ ಸರಿಯಿದೆ. ಎಸ್‌ಸಿ-ಎಸ್‌ಟಿ ಹೆಚ್ಚಿದೆ. ಮುಸ್ಲಿಮರ ಜನ ಸಂಖ್ಯೆ ಎರಡನೇ ಸ್ಥಾನದಲ್ಲಿದೆ, ಸರಿಯಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News