ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕನ್ನಡಿಗ ಮಂಜುನಾಥ್ ಮೃತ್ಯು; ಕುಟಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಮಧುಬಂಗಾರಪ್ಪ
ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದ ಮಂಜುನಾಥ್ ರಾವ್ ಅವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭೇಟಿ ನೀಡಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದರು.
ಇಲ್ಲಿನ ವಿಜಯನಗರದಲ್ಲಿರುವ ಮಂಜುನಾಥ ರಾವ್ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿ, ಮಂಜುನಾಥ ರಾವ್ ಸಹೋದರಿ ದೀಪಾ ಅವರೊಂದಿಗೆ ಚರ್ಚಿಸಿದ ಮಧು ಬಂಗಾರಪ್ಪ, ಶಿವಮೊಗ್ಗಕ್ಕೆ ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರ ತರಿಸಲು ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸರಕಾರ ಅಲ್ಲಿ ಸುರಕ್ಷತೆಯ ಭರವಸೆ ಕೊಟ್ಟಿದ್ದನ್ನು ನಂಬಿ ನಮ್ಮ ಮಕ್ಕಳು ಕಾಶ್ಮೀರಕ್ಕೆ ಹೋದರು. ಅಲ್ಲಿ ಪರಿಸ್ಥಿತಿ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದರೆ ಖಂಡಿತಾ ಕಳುಹಿಸುತ್ತಿರಲಿಲ್ಲ ಎಂದು ಮಂಜುನಾಥ್ ರಾವ್ ಅವರ ಅತ್ತೆ ಗೀತಾ ಅವರು ಸಚಿವ ಮಧು ಬಂಗಾರಪ್ಪ ಅವರ ಎದುರು ದುಃಖ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಧುಬಂಗಾರಪ್ಪ ಅವರು, ಇಂತಹ ಘಟನೆ ಆಗಬಾರದಾಗಿತ್ತು. ಆಗಿದೆ. ಅದು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಸರಕಾರದ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಂಜುನಾಥ್ ರಾವ್ ಅವರ ಕುಟುಂಬದ ಜೊತೆ ಸರಕಾರ ಇದೆ. ನಾಳೆ ಮೃತದೇಹ ಶಿವಮೊಗ್ಗಕ್ಕೆ ತರಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಇದ್ದರು.