ಭದ್ರಾವತಿ | ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಐವರು ಮಕ್ಕಳು ಪತ್ತೆ
Update: 2025-04-07 10:04 IST

ಶಿವಮೊಗ್ಗ: ಭದ್ರಾವತಿ ತಾಲೂಕಿನ ತಳ್ಳಿಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮರಿ ನಾರಾಯಣಪುರ ಗ್ರಾಮದ ಐವರು ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಐವರು ಮಕ್ಕಳು ಸಮೀಪದ ತೋಟದ ಮನೆಯೊಂದರಲ್ಲಿ ಪತ್ತೆಯಾಗಿದ್ದಾರೆ.
ಕುಮರಿ ನಾರಾಯಣಪುರ ಗ್ರಾಮದ ಐವರು ಮಕ್ಕಳು ರವಿವಾರ (ಎ.6) ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದರು. ಪೋಷಕರು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ನದಿ, ಬಸ್ ಹಾಗೂ ರೈಲ್ವೆ ನಿಲ್ದಾಣದಲ್ಲೂ ಪರಿಶೀಲನೆ ನಡೆಸಿದ್ದರು. ಎಲ್ಲೂ ಸಹ ಸುಳಿವು ಸಿಕ್ಕಿರಲಿಲ್ಲ.
ಸಮೀಪದ ತೋಟದ ಮನೆಯೊಂದರಕ್ಕೆ ತೆರಳಿದ್ದ ಮಕ್ಕಳು ರಾತ್ರಿ ಬಾಳೆ ಎಲೆ ಹಾಸಿಕೊಂಡು ಅಲ್ಲೇ ಮಲಗಿದ್ದರು. ಬೆಳಗ್ಗೆಯಾಗುತ್ತಿದ್ದಂತೆ ಎದ್ದು ಊರಿನತ್ತ ಬಂದಿದ್ದಾರೆ. ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಮಧ್ಯೆ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದು, ಸ್ಥಳದಲ್ಲಿ ಆತಂಕ ಮೂಡಿಸಿತ್ತು.