‘ವೈಮನಸ್ಸು ಬದಿಗಿಟ್ಟು ಸರಕಾರದ ವಿರುದ್ಧ ಹೋರಾಡೋಣ’; ಬಿಜೆಪಿ ಸಂಸ್ಥಾಪನಾ ದಿನದಂದು ಪಕ್ಷದ ನಾಯಕರಿಗೆ ಬಿಎಸ್‍ವೈ, ಡಿವಿಎಸ್ ಕರೆ

Update: 2025-04-06 19:49 IST
‘ವೈಮನಸ್ಸು ಬದಿಗಿಟ್ಟು ಸರಕಾರದ ವಿರುದ್ಧ ಹೋರಾಡೋಣ’; ಬಿಜೆಪಿ ಸಂಸ್ಥಾಪನಾ ದಿನದಂದು ಪಕ್ಷದ ನಾಯಕರಿಗೆ ಬಿಎಸ್‍ವೈ, ಡಿವಿಎಸ್ ಕರೆ
  • whatsapp icon

ಬೆಂಗಳೂರು : ಎಲ್ಲರೂ ವೈಮನಸ್ಸು ಬದಿಗಿಟ್ಟು ಒಂದಾಗಿ ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸೋಣ ಎಂದು ಪಕ್ಷದ ರಾಜ್ಯ ನಾಯಕರು, ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಡಿ.ವಿ.ಸದಾನಂದಗೌಡ ಕರೆ ನೀಡಿದ್ದಾರೆ.

ರವಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರನ್ನು ಉದ್ದೇಶಿಸಿ ಬಿ.ಎಸ್.ಯಡಿಯೂರಪ್ಪ ಹಾಗೂ ಡಿ.ವಿ.ಸದಾನಂದಗೌಡ ಮಾತನಾಡಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಕಾರ್ಯಕರ್ತರ ಮಾತು ಕೇಳಿ, ಅಹವಾಲು ಕೇಳಿ. ಯಾರ್ಯಾರೋ ಮಾತನಾಡುತ್ತಾರೆಂದು ಒತ್ತು ಕೊಡುವುದು ಒಳ್ಳೆಯದಲ್ಲ. ನಾಲ್ಕು ಗೋಡೆ ಮಧ್ಯೆಯೇ ಪಕ್ಷದ ವಿಷಯ ಮಾತಾಡಬೇಕು. ಹೊರಗೆ ಮಾತಾಡಬಾರದು ಎಂದರು.

ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ತುಂಬಾ ಸವಾಲುಗಳಿವೆ. ಕಾಂಗ್ರೆಸ್ ಸರಕಾರದಲ್ಲಿ ಹಗರಣಗಳ ಸರಮಾಲೆ ನಡೆಯುತ್ತಿದೆ. ಭ್ರಷ್ಟ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನರು ಬದುಕುವುದು ಕಷ್ಟವಾಗುತ್ತಿದೆ. ಈ ನಡುವೆ ಬಿಜೆಪಿಯಲ್ಲಿನ ಎಲ್ಲ ಸಣ್ಣಪುಟ್ಟ ವಿಚಾರ ಬದಿಗಿಟ್ಟು, ಸರಕಾರದ ವಿರುದ್ಧ ರಣರಂಗಕ್ಕೆ ಇಳಿಯಬೇಕು, ಹೋರಾಟ ಮಾಡಬೇಕು ಎಂದು ಸದಾನಂದಗೌಡ ಹೇಳಿದರು.

ನಮ್ಮ ನಮ್ಮ ನಡುವೆ ವ್ಯತ್ಯಾಸಗಳು ಇರಬಹುದು, ಅದನ್ನು ಎಲ್ಲಿಡಬೇಕೋ ಅಲ್ಲಿಡಬೇಕು. ನಮ್ಮಲ್ಲಿ ಶಿಸ್ತಿನ ಕೊರತೆ ಇದೆ. ಶಿಸ್ತು ರೂಢಿಸಿಕೊಳ್ಳಬೇಕು, ಒಂದಾಗಿ ಮುಂದಕ್ಕೆ ಹೋಗೋಣ. ನಮ್ಮ ನಮ್ಮ ಬಗೆಗೆ ಯಾರೋ ಮಾತನಾಡುತ್ತಾರೆಂದು ವಿಚಲಿತರಾಗುವುದು ಬೇಡ. ಭಾವನಾತ್ಮಕ ಮಾತುಗಳಿಗೂ ಮೇಲ್ನೋಟದ ಮಾತುಗಳಿಗೂ ವ್ಯತ್ಯಾಸವಿದೆ ಎಂದು ಸದಾನಂದಗೌಡ ತಿಳಿಸಿದರು.

ಪ್ರಚಾರ ಪ್ರಿಯತೆಗೆ ಯಾರೂ ಮಾತಾಡುವುದು ಬೇಡ. ಮಾಧ್ಯಮಗಳಲ್ಲಿ ಮಾತಾಡಿ ಯಾರೂ ದೊಡ್ಡವರಾಗಲ್ಲ. ಕೊಳಕುಬಾಯಿ ಮಾತನಾಡುತ್ತೆಂದು ತಲೆಕೆಡಿಸಿಕೊಳ್ಳುವುದು ಬೇಡ. ಕೆಳಗಿನ ಹಂತದವರೆಗೂ ಹೋರಾಟ ರೂಪಿಸುವ ಕೆಲಸ ಮಾಡೋಣ ಎಂದು ಸದಾನಂದಗೌಡ ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಪಕ್ಷ ಕಟ್ಟುವಾಗ ಮೊದಲಿಗೆ ವೇದಿಕೆ ಕಟ್ಟಲು ಜನ ಸಿಗುತ್ತಿರಲಿಲ್ಲ. ಒಂದೂರಿನಿಂದ ಇನ್ನೊಂದೂರಿಗೆ ಹೋಗಲು ಸೌಕರ್ಯ ಇರಲಿಲ್ಲ. ಆರ್ಥಿಕ ಶಕ್ತಿ ಮೊದಲೇ ಇರಲಿಲ್ಲ. ದೇಶದ ಉದ್ದಗಲಕ್ಕೆ ಅಲ್ಲೊಬ್ಬ ಇಲ್ಲೊಬ್ಬ ಸಂಸದ ಇದ್ದರೂ ನಮ್ಮ ಕಾರ್ಯಕರ್ತರು ಧೃತಿಗೆಡಲಿಲ್ಲ. ನಾವು ರಾಜ್ಯಾದ್ಯಂತ ಹೋರಾಡಿ ತಳಮಟ್ಟದಿಂದ ಗಟ್ಟಿಯಾಗಿ ಬಿಜೆಪಿ ತಳಹದಿ ಕಟ್ಟಿದ್ದೇವೆ ಎಂದರು.

ನಾನು 1972ರಲ್ಲಿ ಶಿಕಾರಿಪುರ ಪಟ್ಟಣ ಪಂಚಾಯತ್‍ಗೆ ಸದಸ್ಯನಾದೆ, ನಂತರ ಅಧ್ಯಕ್ಷನಾದೆ. ಶಿಕಾರಿಪುರ ತಾಲೂಕು ಬಿಜೆಪಿ ಘಟಕ ಅಧ್ಯಕ್ಷ, ನಂತರ ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷನಾದೆ. 1988ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷನಾದೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಏಳುಬೀಳು, ಸೋಲು ಗೆಲುವುಗಳನ್ನು ಕಂಡಿದ್ದೇನೆ. ಆದರೆ ಯಾವತ್ತೂ ನಾನು ನಂಬಿದ ಧ್ಯೇಯ ಸಿದ್ಧಾಂತ ಬಿಡಲಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಬಿಜೆಪಿಯಲ್ಲಿ ಎ.ಬಿ.ಸಿ.ಡಿ. ಟೀಂ ಇಲ್ಲ, ಆಗಲೂಬಾರದು..!

ಬಿಜೆಪಿಯಲ್ಲಿ ಎ.ಬಿ.ಸಿ.ಡಿ. ಟೀಂ ಇಲ್ಲ, ಆಗಲೂಬಾರದು. ಯಾರದೋ ಮಾತಿಗೆ ಒತ್ತುಕೊಡಬಾರದು. ನಾವೆಲ್ಲ ಮನಸ್ಸಿನಿಂದ ಮಾತಾಡಬೇಕು. ಪ್ರಚಾರ ಮುಂದೆ ಅಪಪ್ರಚಾರ ಆಗತ್ತದೆ. ಮಾಧ್ಯಮಗಳಲ್ಲಿ ಮಾತನಾಡಿ, ಬ್ಯಾನರ್‍ಗಳಲ್ಲಿ ಕಾಣಿಸಿಕೊಂಡರೆ ರಾಜಕಾರಣಿ ಎನಿಸಿಕೊಳ್ಳಲು ಆಗುವುದಿಲ್ಲ. ಒಬ್ಬರೇ ಪಕ್ಷ ಕಟ್ಟಲು ಆಗುವುದಿಲ್ಲ, ಅದಕ್ಕೆ ಒಂದು ತಂಡವೇ ಬೇಕು. ಕರ್ನಾಟಕ ಬಿಜೆಪಿಯು ದಕ್ಷಿಣ ಭಾರತದ ಹೆಬ್ಬಾಗಿಲು ಆಗಿತ್ತು, ಮುಂದೆಯೂ ಆಗುತ್ತದೆ ಎಂದು ಸದಾನಂದಗೌಡ ಭವಿಷ್ಯ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News