ಯಾದಗಿರಿ | ನರೇಗಾ ಯೋಜನೆ ಹಣ ಲಪಟಾಯಿಸಲು ಸಂಚು: ಗಂಡಸರಿಗೆ ಸೀರೆ ತೊಡಿಸಿ ಫೋಟೋ ಅಪ್ಲೋಡ್ !

ಯಾದಗಿರಿ: ನರೇಗಾ ಯೋಜನೆ ಅಡಿಯಲ್ಲಿ ಹಣ ಲಪಟಾಯಿಸಲು ಹೊಸ ತಂತ್ರ ಹೆಣೆದಿರುವುದು ಬೆಳಕಿಗೆ ಬಂದಿದ್ದು, ಗಂಡಸರಿಗೆ ಸೀರೆ ತೊಡಿಸಿದ ಫೋಟೋ ಆನ್ ಲೈನ್ ಅಪ್ಲೋಡ್ ಮಾಡಿ ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿರುವುದು ಯಾದಗಿರಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಮಲ್ದಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತನೊಬ್ಬರ ಜಮೀನಿನಲ್ಲಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀ ಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಾಲೆಯ ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು.
ಕೂಲಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಅವರ ಫೋಟೋಗಳನ್ನು ತೆಗೆದು ಎನ್ ಎಂಎಂಎಸ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಹಣ ಲಪಟಾಯಿಸುವ ಉದ್ದೇಶದಿಂದ ಪುರುಷರಿಗೆ ಸೀರೆಯನು ತೊಡಿಸಿ ಮಹಿಳೆಯರು ಎಂಬಂತೆ ಬಿಂಬಿಸಿ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ಗ್ರಾಮ ಪಂಚಾಯತ್ ನಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರನೊಬ್ಬ ಬೆಂಬಲ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೂಲಿ ಕಾರ್ಮಿಕರ ವೇತನ ಪಾವತಿ ಮಾಡುವ ಸಂದರ್ಭದಲ್ಲಿ ಪಂಚಾಯತ್ ಮೇಲಧಿಕಾರಿಗಳಿಗೆ ಘಟನೆಯ ವಾಸ್ತವಾಂಶ ತಿಳಿದುಬಂದಿದೆ. ಇದರಲ್ಲಿ ಶಾಮೀಲಾದ ಹೊರಗುತ್ತಿಗೆ ನಕಾರ್ಮಿಕರಿಗೆ ಯಾವುದೇ ರೀತಿ ಹಣ ಪಾವತಿ ಮಾಡಿರುವುದಿಲ್ಲ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಬಸವ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹೊರಗುತ್ತಿಗೆ ನೌಕರನೊಬ್ಬನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.