ನಾಳೆಯಿಂದ ಜನಾಕ್ರೋಶ ಯಾತ್ರೆ; ಸರಕಾರದ ನೀತಿಗಳ ವಿರುದ್ಧ ನಾಲ್ಕು ಹಂತಗಳಲ್ಲಿ ಬಿಜೆಪಿ ಹೋರಾಟ

Update: 2025-04-06 20:43 IST
ನಾಳೆಯಿಂದ ಜನಾಕ್ರೋಶ ಯಾತ್ರೆ; ಸರಕಾರದ ನೀತಿಗಳ ವಿರುದ್ಧ ನಾಲ್ಕು ಹಂತಗಳಲ್ಲಿ ಬಿಜೆಪಿ ಹೋರಾಟ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು : ಬೆಲೆ ಏರಿಕೆ ಸೇರಿದಂತೆ ಇನ್ನಿತರೆ ಅಂಶಗಳನ್ನಿಟ್ಟುಕೊಂಡು ಸರಕಾರದ ವಿರುದ್ಧ ನಾಳೆಯಿಂದ(ಎ.7) ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ರಾಜ್ಯಾದ್ಯಂತ ನಾಲ್ಕು ಹಂತಗಳಲ್ಲಿ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

ಈ ಬಗ್ಗೆ ರವಿವಾರ ರಾಜ್ಯ ಬಿಜೆಪಿ ಮಾಧ್ಯಮ ಪ್ರಕಟನೆ ನೀಡಿದ್ದು, ಎ.7ರ ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದೆ..

ಸರಕಾರದ ದರ ಏರಿಕೆ ನೀತಿ, ಭ್ರಷ್ಟಾಚಾರ, ಕಮಿಷನ್, ದಲಿತ ಹಣ ದುರ್ಬಳಕೆ, ಕಾನೂನು ಅವ್ಯವಸ್ಥೆ, ಮುಸ್ಲಿಮ್ ಓಲೈಕೆ ಖಂಡಿಸಿ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ತಿಳಿಸಿದೆ.

ಎಪ್ರಿಲ್ 7ರಿಂದ 10ರವರೆಗೆ ಮೊದಲ ಹಂತದ ಜನಾಕ್ರೋಶ ಯಾತ್ರೆಯು ಮೈಸೂರು/ಚಾಮರಾಜನಗರ, ಮಂಡ್ಯ/ಹಾಸನ, ಕೊಡಗು/ಮಂಗಳೂರು, ಉಡುಪಿ/ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ. ಎಪ್ರಿಲ್ 13 ರಿಂದ 18ರವರೆಗೆ ಎರಡನೇ ಹಂತದ ಜನಾಕ್ರೋಶ ಯಾತ್ರೆಯು ಶಿವಮೊಗ್ಗ/ಉತ್ತರ ಕನ್ನಡ, ಬೀದರ್/ಕಲಬುರಗಿ, ವಿಜಯಪುರ/ಬಾಗಲಕೋಟೆ, ಬೆಳಗಾವಿ/ಹುಬ್ಬಳ್ಳಿಗಳಲ್ಲಿ ನಡೆಯಲಿದೆ ಎಂದು ಬಿಜೆಪಿ ಹೇಳಿದೆ.

ಇನ್ನು, ಎಪ್ರಿಲ್ 21ರಿಂದ 24ರವರೆಗೆ ಮೂರನೇ ಹಂತದ ಯಾತ್ರೆಯು ಯಾದಗಿರಿ/ರಾಯಚೂರು, ಬಳ್ಳಾರಿ/ವಿಜಯನಗರ, ಕೊಪ್ಪಳ/ಗದಗ, ಹಾವೇರಿ/ದಾವಣಗೆರೆ ಜಿಲ್ಲೆಗಳಲ್ಲೂ, ಎಪ್ರಿಲ್ 27ರಿಂದ ಮೇ 3ರವರೆಗೆ ನಾಲ್ಕನೇ ಹಂತದ ಯಾತ್ರೆಯು ಚಿತ್ರದುರ್ಗ/ತುಮಕೂರು, ಚಿಕ್ಕಬಳ್ಳಾಪುರ/ಕೋಲಾರ, ಬೆಂಗಳೂರು/ಬೆಂಗಳೂರು ಗ್ರಾಮಾಂತರ/ರಾಮನಗರ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಬಿಜೆಪಿ ಮಾಹಿತಿ ನೀಡಿದೆ.

ಬೆಲೆ ಏರಿಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಸ್ವಜನಪಕ್ಷಪಾತ, ತುಷ್ಟೀಕರಣ ವಿರುದ್ಧ ಹೋರಾಟ: ಆರ್.ಅಶೋಕ್

ಕಾಂಗ್ರೆಸ್ ಸರಕಾರ ಮಾಡುತ್ತಿರುವ ಅನ್ಯಾಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಸ್ವಜನಪಕ್ಷಪಾತ, ತುಷ್ಟೀಕರಣ ಮೊದಲಾದವುಗಳನ್ನು ವಿರೋಧಿಸಿ ಜನಾಕ್ರೋಶ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈ ಮಟ್ಟಕ್ಕೆ ಬೆಲೆ ಏರಿಕೆ ಮಾಡಿದ್ದಾರೆ.ಮದ್ಯದ ದರ, ಮೆಟ್ರೋ ದರ, ಕಾಲೇಜು ಪ್ರವೇಶ ಶುಲ್ಕ, ಬಿತ್ತನೆ ಬೀಜ ದರ, ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ. ಈಗ ಕಸದಿಂದಲೂ ದುಡ್ಡು ಹೊಡೆಯಲಾಗುತ್ತಿದೆ. ಬೆಂಗಳೂರಿನ ಜನರು ಕಸಕ್ಕೂ ಶುಲ್ಕ ನೀಡಬೇಕಾಗಿದೆ. ಇದರಿಂದಲೇ ಒಂದೂವರೆ ಕೋಟಿ ರೂ. ಲೂಟಿ ಮಾಡಲಾಗುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News