‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಗೆ ಹೋಗೋಣ’ : ವಿಜಯೇಂದ್ರಗೆ ಯತ್ನಾಳ್ ಸವಾಲು

ವಿಜಯೇಂದ್ರ/ಯತ್ನಾಳ್
ಹುಬ್ಬಳ್ಳಿ : ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನೀನು ರಾಜೀನಾಮೆ ಕೊಡು. ನಾನು ಕೇವಲ ಭಗವಧ್ವಜದ ಮೇಲೆ ಚುನಾವಣೆ ಗೆಲ್ಲುತ್ತೇನೆ. ನನಗೆ ಸಾಬರ(ಮುಸ್ಲಿಮರ) ಮತ ಬೇಡ. ನಿನಗೆ ಆಗ ತಾಕತ್ ಇದೆಯಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಸವಾಲು ಹಾಕಿದ್ದಾರೆ.
ರವಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ಧಮ್ ಇದ್ದರೆ ನನಗೆ ನೇರವಾಗಿ ಮಾತನಾಡಲಿ. ಅದನ್ನು ಬಿಟ್ಟು ಹಂದಿಗಳ ಮೂಲಕ ಮಾತನಾಡಿಸುವುದು ಬೇಡ. ಹಂದಿಗಳು ಮನೆಯಿಂದ ಹೊರಗೆ ಇರಬೇಕು. ಮನೆ ಒಳಗೆ ಕರೆದುಕೊಳ್ಳಬಾರದು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಮುಕ್ತ ಆದ ಮೇಲೆ ನಾನು ಪಕ್ಷಕ್ಕೆ ಹೋಗುತ್ತೇನೆ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್, ಎಸ್.ಎಂ.ಕೃಷ್ಣ, ಜೆ.ಎಚ್.ಪಟೇಲ್ ಅವರ ಕುಟುಂಬಗಳು ಎಲ್ಲಿವೆ ಹೇಳಿ?. ಒಂದು ದಿನ ಎಲ್ಲರೂ ಹೋಗುವುದೇ, ಯಾವುದು ಶಾಶ್ವತ ಅಲ್ಲ. ಆದರೆ, ಒಂದು ಪಕ್ಷವನ್ನು ಯಾವುದೋ ಒಂದು ಕುಟುಂಬಕ್ಕೆ ಕೊಡಬಾರದು ಎಂದು ಯತ್ನಾಳ್ ಹೇಳಿದರು.
ಬೆಂಗಳೂರಲ್ಲಿ ಮತ್ತೊಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಾರಂತೆ. ಅದರ ಬದಲು ಧಾರವಾಡ ಅಥವಾ ಬೆಳಗಾವಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಿ. ಸರಕಾರ ಗ್ಯಾರಂಟಿಗಾಗಿ ಸಾಲ ತೆಗೆದುಕೊಳ್ಳುತ್ತಿದೆ. ಅದರ ಜೊತೆಗೆ ಇನ್ನೊಂದು ಲಕ್ಷ ಕೋಟಿ ರೂ.ಸಾಲ ತೆಗುಕೊಂಡು, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲಿ ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಹಿಂದುಗಳ ಕಗ್ಗೊಲೆ ಆಗುತ್ತಿದೆ. ನಾನು ನಿನ್ನೆ ಖಡಕ್ ಎಚ್ಚರಿಕೆ ಕೊಟ್ಟಿದ್ದಕ್ಕೆ ನಮ್ಮ ಅಧ್ಯಕ್ಷ ಹೋಗಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತನ ಮನೆಗೆ ಹೋಗಿ ಮಾತನಾಡಿ ಬಂದಿದ್ದಾನೆ. ಇಲ್ಲದಿದ್ದರೆ ನಾಪತ್ತೆಯಾಗಿ ಬಿಡುತ್ತಿದ್ದ. ನಾವು ಕೊಡಗಿಗೆ ಹೋಗುತ್ತಿದ್ದೇವೆ ಎಂದು ರಾತ್ರಿ ಡಿ.ಕೆ.ಶಿವಕುಮಾರ್ ಕರೆ ಮಾಡಿ ಹೇಳಿದ್ದಾನೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.