ಕೇರಳ ಜೈಲಿನಿಂದ ಇಬ್ಬರು ನಕ್ಸಲ್ ನಾಯಕರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Update: 2025-04-07 13:04 IST
ಕೇರಳ ಜೈಲಿನಿಂದ ಇಬ್ಬರು ನಕ್ಸಲ್ ನಾಯಕರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು
  • whatsapp icon

ಬೆಳ್ತಂಗಡಿ, ಎ.7: ತಾಲೂಕಿನಲ್ಲಿ ದಾಖಲಾದ ಮೂರು ನಕ್ಸಲ್ ಚಟುವಟಿಕೆ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ನಕ್ಸಲ್ ನಾಯಕರನ್ನು ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಅವರಿಬ್ಬರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ಮೂರು ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸಲಿದ್ದಾರೆ.

 ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿಯನ್ನು 2021ರ ನವೆಂಬರ್ 8ರಂದು ಕೇರಳ ರಾಜ್ಯದ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ತ್ರಿಶೂರ್ ಜೈಲಿನಡಿಲಾಗಿತ್ತು. ಬಿ.ಜಿ.ಕೃಷ್ಣಮೂರ್ತಿ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ 53 ಪ್ರಕರಣಗಳು ಹಾಗೂ ಸಾವಿತ್ರಿ ವಿರುದ್ಧ 22 ಪ್ರಕರಣಗಳು ತನಿಖೆಯಲ್ಲಿವೆ.

2012-2013ರಲ್ಲಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಚಂದ್ರ ಭಟ್ ಎಂಬವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರು, ಬೈಕಿಗೆ ಬೆಂಕಿ ಹಚ್ಚಿದ ಪ್ರಕರಣ, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಹತ್ಯಡ್ಕ ಗ್ರಾಮದ ಕುಂಟಲಪಲ್ಲೆಯಲ್ಲಿ ಗೋಡೆ ಬರಹ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಂತಿಗೆ ಗ್ರಾಮದಲ್ಲಿ ಭಾರಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಇವರಿಬ್ಬರನ್ನು ಪೊಲೀಸರು ಬಾಡಿ ವಾರೆಂಟ್ ಮೂಲಕ ತ್ರಿಶೂರ್ ಜೈಲಿನಿಂದ ಎ.7ರಂದು ಭದ್ರತೆಯಲ್ಲಿ ಕರೆದುಕೊಂಡು ಬಂದಿದ್ದಾರೆ.

ಕೇರಳ ರಾಜ್ಯದಿಂದ ಅಲ್ಲಿನ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಬಳಿಕ ತನಿಖಾಧಿಕಾರಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ತಂಡಕ್ಕೆ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ಇಬ್ಬರು ನಕ್ಸಲರನ್ನು ಒಪ್ಪಿಸಿದೆ. ಬೆಳ್ತಂಗಡಿ, ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ ಪೊಲೀಸರು ಭದ್ರತೆ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News