ಶಾಸಕ ಶಿವರಾಜ್ ಪಾಟೀಲ್ ರ ಲೊಕೇಶನ್ ಟ್ರ್ಯಾಕ್ ಆರೋಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ: ಗೃಹಸಚಿವ ಜಿ.ಪರಮೇಶ್ವರ್

Update: 2025-04-04 12:22 IST
Photo of Dr.G.Parameshwar

ಡಾ.ಜಿ.ಪರಮೇಶ್ವರ್

  • whatsapp icon

ಬೆಂಗಳೂರು: ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ವಲಯ ಐಜಿಪಿ ಹಾಗೂ ಡಿಜಿಪಿ ಅವರಿಂದ ಮಾಹಿತಿ ಪಡೆಯುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಲೊಕೇಶನ್ ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರ ಆರೋಪದ ಕುರಿತು ಮಾಧ್ಯಮದವರಿಗೆ ಸಚಿವರು ಪ್ರತಿಕ್ರಿಯಿಸಿದರು.

ಎಸ್ಪಿ ಹಾಗೂ ಐಜಿಪಿಯವರೊಂದಿಗೆ ಮಾತನಾಡುತ್ತೇನೆ. ಅಂತಹ ಘಟನೆ ಏನಾದರು ನಡೆದಿದ್ದರೆ, ಯಾಕೆ ನಡೆದಿದೆ, ಯಾವ ಕಾರಣಕ್ಕೆ ಆಗಿದೆ, ಯಾರು ಅನುಮತಿ ಕೊಟ್ಟಿದ್ದಾರೆ ಎಂದು ವಿಚಾರಿಸಿ, ಮುಂದಿನ ಕ್ರಮ ತೆಗದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವಕ್ಫ್ ಮಸೂದೆ ರಾಜಕೀಯ ಕಾರಣಕ್ಕಾಗಿ ಮಾಡಿಕೊಳ್ಳಲಾಗಿದೆ ವಿನಃ ಜನರ ಹಿತಾಸಕ್ತಿಗಾಗಿ ತಂದಿಲ್ಲ ಎಂದು ಪುನರುಚ್ಛಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಡಿರುವ ನಿರಾಧಾರ ಆರೋಪಕ್ಕೆ ಸದನದಲ್ಲಿ ಅವರೇ ಸೂಕ್ತ ಉತ್ತರ ನೀಡಿದ್ದಾರೆ. ಯಾವುದಾದರು ಆಸ್ತಿ ಕಬಳಿಕೆ ಮಾಡಿದ್ದರೆ ರಾಜಕೀಯ ನೀವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.

ವಿಧಾನ ಪರಿಷತ್ಗೆ ನಾಮನಿರ್ದೇಶನ ಸದಸ್ಯರ ಆಯ್ಕೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಬಿಟ್ಟಿರುವ ವಿಚಾರ. ನಿನ್ನೆ ಭೇಟಿ ವೇಳೆ ಎಐಸಿಸಿ ವರಿಷ್ಠರೊಂದಿಗೆ ಮಾತನಾಡಿದ್ದಾರಯೇ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ನಿಗಮ ಮಂಡಳಿ ವಿಚಾರದಲ್ಲಿ ನನ್ನ ಶಿಫಾರಸು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂಬುದು ಸುಳ್ಳು. ಆಯ್ಕೆ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದರು. ನಾನು ಸಮಾಧಾನವಾಗಿಯೇ ಇದ್ದೇನೆ ಎಂದು ಹೇಳಿದರು.

ಪರಿಷತ್ ಸದಸ್ಯರ ಆಯ್ಕೆ ವಿಚಾರದಲ್ಲಿ ನನ್ನನ್ನು ಪರುಗಣಿಸುವ ಅಗತ್ಯವಿಲ್ಲ. ಅನೇಕ ಸಂದರ್ಭದಲ್ಲಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ನಾನು ಅಧ್ಯಕ್ಷನಾಗಿದ್ದಾಗ ಕೇಳುತ್ತಿರಲಿಲ್ಲ. ಕಠಿಣವಾದ ತೀರ್ಮಾನ ತೆಗೆದುಕೊಳ್ಳುವಾಗ ಕೇಳುತ್ತಿದ್ದೆವು. ಸುಲಭವಾದ ತೀರ್ಮಾನ ತೆಗೆದುಕೊಳ್ಳುವಾಗ ಕೇಳುತ್ತಿರಲಿಲ್ಲ. ನಾಲ್ಕು ಜನರ ನಾಮನಿರ್ದೇಶನ ಮಾಡಬೇಕಿದೆ. ಇದು ಚುನಾವಣೆ ಅಥವಾ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಬೇಕಿಲ್ಲ. ಸುಲಭವಾಗಿರುವುದರಿಂದ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟದ್ದು. ವರಿಷ್ಠರ ಜೊತೆ ಚರ್ಚಿಸಿ ಅನುಮತಿ ತೆಗೆದುಕೊಂಡು ಬರುತ್ತಾರೆ ಎಂದರು

ಕೆಲವು ದಿನಗಳ ಹಿಂದೆ ನೋವಿನಲ್ಲಿದ್ದ ತಾವು, ಈಗ ಸಮಾಧಾನವಾಗಿದ್ದೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತು ನೋವಲ್ಲಿಲ್ಲ. ನಮ್ಮದೇನು ಯಾವಾಗಲು ಒಂದೇ ರೀತಿ. ಗ್ರಾಫ್ನಲ್ಲಿ ಏರಿಳಿತ ಇಲ್ಲ. ಒಂದೇ ರೀತಿ ಇದೆ ಎಂದು ಅವರು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News