ಡಾ.ಅಂಬೇಡ್ಕರ್‌ಗೆ ಅವಮಾನ ಮಾಡಿದ ಕೀರ್ತಿ ಯಾರಿಗೆ ಸಲ್ಲಬೇಕು? : ಖರ್ಗೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಶ್ನೆ
ಎಸ್.ಸುರೇಶ್ ಕುಮಾರ್
ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ಮತ್ತು ಅವರ ತೀರಿ ಹೋದ ನಂತರ ತೀವ್ರ ಅವಮಾನ ಮಾಡಿದ ಕೀರ್ತಿ ಯಾರಿಗೆ ಸಲ್ಲಬೇಕು? ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
‘ಬಿಜೆಪಿ, ಆರೆಸ್ಸೆಸ್ ಅಂಬೇಡ್ಕರ್ ಶತ್ರುಗಳು’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಮಾಧ್ಯಮ ಪ್ರಕಟನೆ ಮೂಲಕ ಖರ್ಗೆ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸಲೇಬೇಕೆಂದು ಎಲ್ಲ ತಂತ್ರ ಉಪಯೋಗಿಸಿ ಶತಾಯಗತಾಯ ಪ್ರಯತ್ನಿಸಿ ಯಶಸ್ವಿಯಾಗಿದ್ದು, ಯಾವ ರಾಜಕೀಯ ಪಕ್ಷ ಎಂದು ಎಸ್.ಸುರೇಶ್‍ಕುಮಾರ್ ಪ್ರಶ್ನಿಸಿದ್ದಾರೆ.
ಅಂಬೇಡ್ಕರ್ ಅವರು ಚುನಾವಣೆ ನಿಂತಾಗ ಅವರಿಗೆ ಎಲೆಕ್ಷನ್ ಪ್ರಮುಖರಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿ ಯಾರು ಎಂದು ಎಸ್.ಸುರೇಶ್‍ಕುಮಾರ್ ಕೇಳಿದ್ದಾರೆ.
ಅಂಬೇಡ್ಕರ್ ಅವರಿಗೆ ಸುಮಾರು 34 ವರ್ಷಗಳಷ್ಟು ದೀರ್ಘ ಕಾಲ ಭಾರತ ರತ್ನ ಪ್ರಶಸ್ತಿ ನೀಡುವಲ್ಲಿ ವಿಳಂಬ ಮಾಡಿದ ಅಥವಾ ತಿರಸ್ಕಾರ ಮಾಡಿದ ಶ್ರೇಯಸ್ಸು ಯಾವ ಪಕ್ಷದ್ದು ಎಂದು ಎಸ್.ಸುರೇಶ್‍ಕುಮಾರ್ ಪ್ರಶ್ನಿಸಿದ್ದಾರೆ.
ಅಂಬೇಡ್ಕರ್ ತೀರಿಕೊಂಡಾಗ ದಿಲ್ಲಿಯಲ್ಲಿ ಅವರ ಸ್ಮಾರಕ ನಿರ್ಮಾಣವಾಗದಂತೆ ನೋಡಿಕೊಂಡ ಸಾಹಸ ಯಾರದ್ದು? ಎಂದು ಎಸ್.ಸುರೇಶ್‍ಕುಮಾರ್ ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆಕ್ಕೆಲ್ಲಾ ಉತ್ತರ ತಿಳಿದಿದ್ದಲೂ, ಆತ್ಮಸಾಕ್ಷಿಯ ಅಭಾವದಿಂದ, ಕುಟುಂಬದ ಮೇಲಿನ ವ್ಯಾಮೋಹದಿಂದ ಸತ್ಯ ನುಡಿಯಲಾರರು ಎಂದು ಎಸ್.ಸುರೇಶ್‍ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.