ಬೆಂಗಳೂರು | ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ ವಿರುದ್ಧ ದೂರು

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಜೆಪಿ ಕಾರ್ಯಕರ್ತನೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಡಗಿನ ಕಾಂಗ್ರೆಸ್ ಶಾಸಕರಾದ ಎ.ಎಸ್. ಪೊನ್ನಣ್ಣ, ಮಂಥರ್ ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತನ್ನೀರಾ ಮೈನಾ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ(32) ಎಂಬವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಕೊಡಗು ಸಮಸ್ಯೆಗಳು' ಎನ್ನುವ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್ ಆಗಿದ್ದ ವಿನಯ್ ಮರಣ ಪತ್ರ ಬರೆದಿಟ್ಟಿದ್ದರು. ರಾಜಕೀಯ ಪ್ರೇರಿತ ಎಫ್.ಐ.ಆರ್.ನಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣ ಪತ್ರ ಬರೆದಿಟ್ಟು, ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.
ಕೆಲ ಸಮಯದ ಹಿಂದೆ ಶಾಸಕ ಎ.ಎಸ್.ಪೊನ್ನಣ್ಣ ಬಗ್ಗೆ ವಿನಯ್ ಸೋಮಯ್ಯ ಅಪಹಾಸ್ಯ ಮಾಡಿ ವಾಟ್ಸ್ ಆ್ಯಪ್ ಪೋಸ್ಟ್ ಮಾಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನ್ನೀರಾ ಮೈನಾ ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.
ಇದೇ ಕಾರಣಕ್ಕೆ ಮೂವರ ಕಿರುಕುಳದಿಂದ ನೊಂದು ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವಿನಯ್ ಅವರ ಸಹೋದರ ಜೀವನ್ ಸೋಮಯ್ಯ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.