‘ಸ್ಮಾರ್ಟ್ ಮೀಟರ್ ಹಗರಣ; ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು : ಸಿ.ಎನ್.ಅಶ್ವತ್ಥನಾರಾಯಣ್

ಬೆಂಗಳೂರು : ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣ ವ್ಯವಸ್ಥಿತವಾಗಿ ನಡೆದಿದ್ದು, 9 ಸುಳ್ಳುಗಳನ್ನು ಹೇಳಿದ್ದಾರೆ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಹೋರಾಟವನ್ನು ಬಿಜೆಪಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ಪತ್ರಿಕಾಗೋಷ್ಠಿ ನಡೆಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ಸರಕಾರ ನಿಗದಿತ ನಿಯಮಗಳ ಪ್ರಕಾರ, ಟೆಂಡರ್ ಮಾಡಿದ್ದಾಗಿ ಹೇಳಿದ್ದಾರೆ. ಪ್ರಿಬಿಡ್ ಟೆಂಡರ್‍ನಲ್ಲಿ ಯಾರೂ ಬಂದಿರಲಿಲ್ಲ ಎಂದಿದ್ದಾರೆ. ಆದರೆ, 10 ಜನರು ಭಾಗವಹಿಸಿದ್ದರು. 117 ಜನರು ಮಾಹಿತಿ ಕೇಳಿದ್ದರು ಎಂದು ವಿವರಿಸಿದರು.
ಕೇಂದ್ರದ ನಿಯಮಾವಳಿಯಂತೆ ಐಎಸ್ 16444 ಸ್ಟಾಂಡರ್ಡ್ ಇರುವ ಹತ್ತಾರು ಜನರಿದ್ದಾರೆ. ಅವರನ್ನೇ ರಾಜ್ಯವು ಪರಿಗಣಿಸಬೇಕಿತ್ತು. 1 ಲಕ್ಷ ಸ್ಮಾರ್ಟ್ ಮೀಟರ್ ಉತ್ಪಾದಿಸಿ ವಿತರಿಸಿದ ಅನುಭವ ಬೇಕಿತ್ತು. ಟೆಂಡರ್ 200 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತದ್ದಾದರೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಪ್ರಿಬಿಡ್ ವೇಳೆ ಇದನ್ನು ಹೇಳಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.
ಇಂಧನ ಸಚಿವರು ತಾತ್ಕಾಲಿಕ ಸಂಪರ್ಕ ಪಡೆಯುವವರಿಗೆ ಹಾಗೂ ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದಿದ್ದಾರೆ. ಆದರೆ, ಇದು ಕಡ್ಡಾಯವಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಎಲ್ಲ ಗ್ರಾಹಕರಿಗೆ, ಫೀಡರ್, ಟ್ರಾನ್ಸ್ ಫಾರ್ಮರ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕವೇ ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಬಹುದೆಂದು ಕೇಂದ್ರ ವಿದ್ಯುತ್ ಪ್ರಾಧಿಕಾರವು (ಸಿಇಸಿ) ತಿಳಿಸಿದೆ ಎಂದು ದಾಖಲೆ ನೀಡಿದರು.
ಗ್ರಾಹಕರ ಜೇಬಿನಿಂದ ಹಣ ಲೂಟಿ ಮಾಡಲು ಸರಕಾರ ಮುಂದಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಲೂಟಿ, ಕಳ್ಳತನ ಮಾಡುತ್ತಿದ್ದಾರೆ. ಗ್ರಾಹಕರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು, ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಅವರು ಪ್ರಕಟಿಸಿದರು.