ಕೆಎಸ್‍ಎಂಸಿಎಲ್ ಸಂಸ್ಥೆಯಿಂದ ಸರಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ಮಲ್ಲಿಕಾರ್ಜುನ

ಬೆಂಗಳೂರು : ಗಣಿ ಮತ್ತು ಭೂ ವಿಜ್ಞಾನ ವ್ಯಾಪ್ತಿಗೆ ಬರುವ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (ಕೆಎಸ್‍ಎಂಸಿಎಲ್) ಸಂಸ್ಥೆಯಿಂದ ಶಾಲೆಗಳ ಕೊಠಡಿಗಳ ನಿರ್ಮಾಣ, ವಾಣಿಜ್ಯ ಸಮುಚ್ಚಯ ಕಟ್ಟಡ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ತಿಳಿಸಿದರು.
ಸೋಮವಾರ ಕೆಎಸ್‍ಎಂಸಿಎಲ್ ಸಂಸ್ಥೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಹಿರಿಯ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದ ಬಳಿಕ ಮಾತನಾಡಿದ ಅವರು, ಸಂಸ್ಥೆಯ ಒಟ್ಟು ಆದಾಯ ಮತ್ತು ಲಾಭದ ನಿರೀಕ್ಷೆಯಿದೆ, ನಿವ್ವಳ ಆದಾಯ ತೆರಿಗೆಯ ನಂತರ 492 ಕೋಟಿ ರೂ.ಗಳು ಆಗುವ ನಿರೀಕ್ಷೆಯಿದೆ. ಸಂಸ್ಥೆಯು ರೇಷ್ಮೆ ಇಲಾಖೆಯೊಂದಿಗೆ ಜಂಟಿ ಸಹಭಾಗಿತ್ವದೊಂದಿಗೆ ಕಚೇರಿ ಹಾಗೂ ವಾಣಿಜ್ಯ ಸಮುಚ್ಚಯ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ 666 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿ. ವತಿಯಿಂದ ಸರಕಾರಿ ಶಾಲಾ ಕೊಠಡಿಗಳ ನಿರ್ಮಾಣವು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು 14.68 ಕೋಟಿ ರೂ.ವೆಚ್ಚದಲ್ಲಿ ಕಾರ್ಪೊರೇಟ್ ಸೋಷಿಯಲ್ ರಸಪಾನ್ಸಿಬಿಲಿಟಿ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಕೆಎಸ್‍ಎಂಸಿಎಲ್ ಸಂಸ್ಥೆಯಿಂದ ಹಮ್ಮಿಕೊಂಡಿರು ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಶುಸಂಗೋಪನ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ಕೆಎಸ್‍ಎಂಸಿಎಲ್‍ನ ಅಧ್ಯಕ್ಷರು ಹಾಗೂ ಶಾಸಕ ಜಿ.ಎಸ್.ಪಾಟೀಲ್, ಕೆಎಸ್‍ಎಂಸಿಎಲ್ ಎಂ.ಡಿ ಮಹಾಂತೇಶ್ ಬಿಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.