ಪೌರಕಾರ್ಮಿಕರ ಕಲ್ಯಾಣಕ್ಕೆ 730ಕೋಟಿ ರೂ.ಹಣ ಮೀಸಲು: ಡಿ.ಕೆ.ಶಿವಕುಮಾರ್

ಬೆಂಗಳೂರು : ಪ್ರಸಕ್ತ ವರ್ಷದ ಬಿಬಿಎಂಪಿ ಬಜೆಟ್‍ನಲ್ಲಿ ಪೌರಕಾರ್ಮಿಕರ ವೇತನ ಪಾವತಿ, ಪಿಂಚಣಿ ಪಾವತಿಗೆ ಸೇರಿ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ 730 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಇಲ್ಲಿನ ಅರಮನೆ ಮೈದಾನದಲ್ಲಿ ಪೌರ ಕಾರ್ಮಿಕರ ಮಹಾಸಂಘವು ಆಯೋಜಿಸಿದ್ದ ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಬಜೆಟ್‍ನಲ್ಲಿ ಪೌರಕಾರ್ಮಿಕರ ವೇತನ ಪಾವತಿಗೆ 500 ಕೋಟಿ ರೂ., ಪಿಂಚಣಿ ಪಾವತಿಗೆ 107 ಕೋಟಿ ರೂ. ಹಾಗೂ ಮೃತಪಟ್ಟವರ ಹೆಸರಿನಲ್ಲಿ 10 ಲಕ್ಷ ಹಣ ರೂ. ಮೀಸಲಿಟ್ಟು 6 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ತರಲಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರ ಶೂ, ಕೈಗವಸು ಸೇರಿದಂತೆ ಇತರೆ ಸಲಕರಣೆಗಳ ವಿತರಣೆಗೆ 5 ಕೋಟಿ ರೂ., ಸಮವಸ್ತ್ರಕ್ಕೆ 6 ಕೋಟಿ ರೂ., ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಗೆ 6 ಕೋಟಿ ರೂ., ಆರೋಗ್ಯಕ್ಕೆ 4 ಕೋಟಿ ರೂ., ಒಂಟಿ ಮನೆಗೆ ಪ್ರತ್ಯೇಕವಾಗಿ 30 ಕೋಟಿ ರೂ., ಕೌಶಲ್ಯ ಅಭಿವೃದ್ದಿಗೆ 5 ಕೋಟಿ ರೂ., ಟ್ಯಾಕ್ಸಿ, ಆಟೋ ಚಾಲಕರಿಗೆ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.
ಪೌರಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವುದೇ ಕಾಂಗ್ರೆಸ್ ಸರಕಾರದ ಸಂಕಲ್ಪ ಮಾಡಿದೆ. ಪೌರ ಕಾರ್ಮಿಕರು ನಮ್ಮ ದೇಶದ ಶಕ್ತಿಯಾಗಿದ್ದು, ಕಾಂಗ್ರೆಸ್ ಸರಕಾರ ಪೌರಕಾರ್ಮಿಕರ ಶಕ್ತಿ ಎಂಬುದನ್ನು ಮರೆಯುವಂತಿಲ್ಲ. ಪೌರ ಕಾರ್ಮಿಕರ ಕೆಲಸ ಖಾಯಂ ಆದ ತಕ್ಷಣ ಅವರ ಮಾಸಿಕ ಸಂಬಳ 50 ಸಾವಿರ ರೂ. ಮುಟ್ಟುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇಂದೇ ಪೌರ ಕಾರ್ಮಿಕರ ನೇಮಕಾತಿ ಪತ್ರ ನೀಡಬೇಕು ಎನ್ನುವ ಆಲೋಚನೆ ಇತ್ತು. ಒಂದಷ್ಟು ಸಿಂದುತ್ವ ಬಾಕಿ ಇರುವ ಕಾರಣ ಮೇ 1ರಂದು ನೇಮಕಾತಿ ಪತ್ರ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ನಾನು ಸಲಹೆ ನೀಡಿದೆ. ವಾಹನ ಚಾಲಕರು, ಲೋಡರ್ಸ್ ಮನವಿಯನ್ನು ಕಾರ್ಯಗತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನಿಡಿದರು.
ಪೌರ ಕಾರ್ಮಿಕರ ಖಾಯಂ ವಿಚಾರದಲ್ಲಿ ಒಂದಷ್ಟು ಅಧಿಕಾರಿಗಳು ಸಿಂಧುತ್ವ ನೀಡುವುದಕ್ಕೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ದೂರುಗಳು ಬರುತ್ತಿವೆ. ಯಾರೂ ಒಂದೇ ಒಂದು ರೂಪಾಯಿ ಹಣ ನೀಡಬಾರದು. ಹಣ ಕೇಳಿದರೆ ನನಗೆ ಲಿಖಿತವಾಗಿ ದೂರು ನೀಡಬೇಕು. ಸಿಂಧುತ್ವ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎಚ್. ಮುನಿಯಪ್ಪ, ಸಫಾಯಿ ಕರ್ಮಚಾರಿಗಳ ಮಹಾಸಂಘದ ರಾಜ್ಯ ಅಧ್ಯಕ್ಷ ನಾರಾಯಣ ಮತ್ತಿತರರು ಭಾಗವಹಿಸಿದ್ದರು.