ಬೆಂಗಳೂರು | ವಕ್ಫ್ ತಿದ್ದುಪಡಿ ಮಸೂದೆ ರದ್ದುಗೊಳಿಸಲು ಆಗ್ರಹಿಸಿ ಧರಣಿ

ಬೆಂಗಳೂರು : ವಕ್ಫ್ ತಿದ್ದುಪಡಿ ಮಸೂದೆ 2025ನ್ನು ರದ್ದುಗೊಳಿಸಲು ಆಗ್ರಹಿಸಿ, ಸಂವಿಧಾನ ಪರ ನಾಗರಿಕರಿಂದ ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ವಕೀಲ ಬಿ.ಟಿ.ವೆಂಕಟೇಶ್, ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ ಕಾನೂನು. ದೇಶದ ಸಂವಿಧಾನ ಬರೆಯುವಾಗ ಮೂಲಭೂತ ಹಕ್ಕುಗಳನ್ನು ಯಾರೂ ಕೂಡ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ದೇಶದಲ್ಲಿ ಸಂವಿಧಾನ ಮಾತ್ರವೇ ದೊಡ್ಡದು ಎನ್ನುವುದನ್ನು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಿಂದ ಸ್ಪಷ್ಟವಾದ ತೀರ್ಮಾನ ಬಂತು. ಸಂವಿಧಾನ ಮಾತ್ರ ದೊಡ್ಡದು ಎಂದರೆ, ನನ್ನನ್ನು ನಾನು ಗುರುತಿಸಿಕೊಳ್ಳುವ ಮೂಲಭೂತ ಹಕ್ಕುಗಳು ಎಂದು ಅಭಿಪ್ರಾಯಪಟ್ಟರು.
ಕಳೆದ ನೂರು ವರ್ಷಗಳಲ್ಲಿ ಆರೆಸ್ಸೆಸ್ ಸಂಘಟನೆ ವಕ್ಫ್ ನಂತಹ ಕಾನೂನುಗಳನ್ನು ವಿರೋಧಿಸುತ್ತಾ ಬಂದಿದೆ. ಈಗ ಅವರು ಅಧಿಕಾರದಲ್ಲಿ ಇದ್ದಾರೆ. ಸಂವಿಧಾನ ಹೇಗೆ ಬದಲಾವಣೆ ಮಾಡಬೇಕು ಎನ್ನುವುದು ಆರೆಸ್ಸೆಸ್ ಪ್ರಯತ್ನ. ನೇರವಾಗಿ ಅದನ್ನು ಮಾಡಲು ಬರುವುದಿಲ್ಲ. ಅದಕ್ಕಾಗಿ ಒಂದೊಂದೆ ಹೆಜ್ಜೆಯನ್ನು ನಾಶಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅದರಿಂದ ಯಾರಿಗೂ ಅನುಕೂಲ ಆಗುವುದಿಲ್ಲ. ವಕ್ಫ್ ತಿದ್ದುಪಡಿ ಮಸೂದೆಯಿಂದ ಇರುವ ಒಂದು ಆತಂಕ ಏನೆಂದರೆ, ಅಯೋಧ್ಯೆಯಲ್ಲಿ ಆದಂತಹ ಗಲಭೆಗಳು ಪ್ರತಿ ಹಳ್ಳಿಯಲ್ಲಿ ಆಗಬಹುದು. ಹಿಂದೆ ವಕ್ಫ್ ಬೈ ಯೂಸರ್ ಎಂದು ಇತ್ತು. ಆದರೆ ಈಗ ಸರಕಾರದ್ದು ಎಂದು ಹೇಳಲಾಗಿದೆ. ವಕ್ಫ್ ಆಸ್ತಿಯನ್ನು ದಾಖಲು ಮಾಡಲು 6 ತಿಂಗಳಲ್ಲಿ ಸಮಯ ನೀಡಲಾಗಿದೆ. 6 ತಿಂಗಳಲ್ಲಿ ಎಲ್ಲ ದಾಖಲು ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಹೊಸ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮಾಡಬೇಕಿದೆ. ಕಳೆದ ಹತ್ತು ವರ್ಷದಲ್ಲಿ ಸಂಘಪರಿವಾರ ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದೆ. ವಕ್ಫ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅದಕ್ಕಾಗಿ ಎಲ್ಲದರ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆನೀಡಿದರು.
ಇದೇ ವೇಳೆ ಧರಣಿನಿರತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ಹೋರಾಟಗಾರ ಹೆಬ್ಬಾಳ ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಮಲ್ಲು ಕುಂಬಾರ್, ವಕೀಲ ಎಂ.ಕೆ.ಮೇತ್ರಿ, ನಝ್ಮಾ ನಝೀರ್ ಮತ್ತಿತರರು ಹಾಜರಿದ್ದರು.