ʼಹನಿಟ್ರ್ಯಾಪ್ʼ ಪ್ರಕರಣಕ್ಕೂ ಕಾನೂನು ಸುವ್ಯವಸ್ಥೆಗೂ ಸಂಬಂಧವಿಲ್ಲ: ಡಾ.ಮಹದೇವಪ್ಪ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ಹನಿಟ್ರ್ಯಾಪ್ ಪ್ರಕರಣಕ್ಕೂ, ಕಾನೂನು ಸುವ್ಯವಸ್ಥೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಸಚಿವ ಕೆ.ಎನ್.ರಾಜಣ್ಣ ದೂರು ನೀಡಿದ್ದಾರೆ. ಅದರ ತನಿಖೆಯಾಗುತ್ತಿದೆ. ಈ ಹಂತದಲ್ಲಿ ಯಾವುದೇ ವಿಚಾರ ಚರ್ಚಿಸುವುದಿಲ್ಲ ಎಂದರು.
ಸಚಿವ ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಯಾವುದೇ ವಿಚಾರಗಳಾಗಿದ್ದರೂ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ನಾವು ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಡಾ.ಎಚ್.ಸಿ.ಮಹದೇವಪ್ಪ ಉತ್ತರಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಉಪಹಾರ ಕೂಟ ನಡೆಸಿದ ವಿಷಯದ ಬಗೆಗೆ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಮತ್ತು ನಾನು 30 ವರ್ಷದ ಸ್ನೇಹಿತರಾಗಿದ್ದು, ಪದೇಪದೇ ಭೇಟಿ ಮಾಡುತ್ತಿರುತ್ತೇವೆ. ಸಹಜವಾಗಿಯೇ ಉಪಹಾರಕ್ಕೆ ಆಹ್ವಾನಿಸಿದ್ದರು ಎಂದು ಡಾ.ಮಹದೇವಪ್ಪ ಹೇಳಿದರು.