ಬೆಂಗಳೂರು | ಎಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ: ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು
Update: 2025-03-29 17:34 IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಸೆಸ್ಸೆಲ್ಸಿ ವಿದ್ಯಾರ್ಥಿನಿಯ ಮೇಲೆ ಹಲ್ಲೆಗೈದ ಆರೋಪದಡಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16 ವರ್ಷದ ಎಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಬಿದಿರಿನ ಕೋಲಿನಿಂದ ಶಿಕ್ಷಕಿ ಹೊಡೆದು ಗಾಯಗೊಳಿಸಿರುವ ಆರೋಪದಡಿ ಪೋಷಕರು ನೀಡಿದ ದೂರಿನನ್ವಯ ಎಫ್‍ಐಆರ್ ದಾಖಲಿಸಿಕೊಂಡಿರುವ ಗಿರಿನಗರ ಠಾಣೆಯ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
‘ತನ್ನ ಮಗಳಿಗೆ ಶಾಲಾ ಶಿಕ್ಷಕಿಯೊಬ್ಬರು ಅವಾಚ್ಯ ಪದಗಳಿಂದ ನಿಂದಿಸಿ, ತರಗತಿಗೆ ಹಾಜರಾತಿಯಿಲ್ಲವೆಂದರೆ ಫಲಿತಾಂಶಕ್ಕೆ ಗ್ಯಾರಂಟಿಯಿಲ್ಲ. ಅಂಕಪಟ್ಟಿ ನೀಡುವುದಿಲ್ಲ ಎಂದು ಬಿದಿರಿನ ಕೋಲಿನಿಂದ ಕೈಕಾಲುಗಳಿಗೆ ಹೊಡೆದಿದ್ದಾರೆ’ ಎಂದು ವಿದ್ಯಾರ್ಥಿನಿಯ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.