ಬಿಬಿಎಂಪಿ ಬಜೆಟ್‍ನಲ್ಲಿ ಕಸ ತೆರಿಗೆ ಪ್ರಸ್ತಾಪ; ಬ್ರ್ಯಾಂಡ್ ಬೆಂಗಳೂರಿನಲ್ಲಿ ಕಸಕ್ಕೆ ಟ್ಯಾಕ್ಸ್..!

Update: 2025-03-29 21:44 IST
ಬಿಬಿಎಂಪಿ ಬಜೆಟ್‍ನಲ್ಲಿ ಕಸ ತೆರಿಗೆ ಪ್ರಸ್ತಾಪ; ಬ್ರ್ಯಾಂಡ್ ಬೆಂಗಳೂರಿನಲ್ಲಿ ಕಸಕ್ಕೆ ಟ್ಯಾಕ್ಸ್..!
  • whatsapp icon

ಬೆಂಗಳೂರು : ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಅಡಿ ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಈ ಬಾರಿಯ ಬಿಬಿಎಂಪಿ ಬಜೆಟ್‍ನಲ್ಲಿ ಪರಿಚಯ ಮಾಡಲಾಗಿದ್ದು, ಈ ಮೂಲಕ ಕಸ ಸಂಗ್ರಹಣಾ ಬಳಕೆ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸುವುದಾಗಿ ಪ್ರಕಟಿಸಲಾಗಿದೆ.

ಶನಿವಾರ ನಗರದ ಟೌನ್ ಹಾಲ್ ಸಭಾಂಗಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ನೆ ಸಾಲಿನ ಆಯವ್ಯಯವನ್ನು ಬಿಬಿಎಂಪಿ ಆಡಳಿತಗಾರ ಆರ್.ಉಮಾಶಂಕರ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಮಂಡಿಸಿ, 2025-26ನೆ ಸಾಲಿನಿಂದ ನಾಗರಿಕರಿಂದ ಕಸ ಸಂಗ್ರಹಣಾ ಬಳಕೆ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಇನ್ನೂ, ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ತೃತೀಯ ಲಿಂಗಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಸುಮಾರು 500 ಎಲೆಕ್ಟ್ರಿಕ್ ಸಾರಿಗೆ ಆಟೋಗಳು, ಸರಕು ಇ-ಆಟೊಗಳನ್ನು ಖರೀದಿಸಲು ಆರ್ಥಿಕ ನೆರವು ನೀಡುವ ಮೂಲಕ ಇ-ಸಾರಥಿ ಯೋಜನೆಯನ್ನು ಜಾರಿಗೊಳಿಸಲು 10 ಕೋಟಿ ಮೀಸಲಿಡಲಾಗಿದೆ ಎಂದರು.

1000 ಅರ್ಹ ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಮತ್ತು ವಿಶೇಷ ಚೇತನರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲು ಈ ವರ್ಷ 15 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ತೃತೀಯ ಲಿಂಗಿಗಳ ಸಮುದಾಯ ಮತ್ತು ಇತರೆ ಆರ್ಥಿಕ ಹಿಂದುಳಿದವರ ಅಭಿವೃದ್ಧಿಗಾಗಿ, ಪಾಲಿಕೆಯಿಂದ ಯೋಜನಾ ವೆಚ್ಚದ ಶೇ.50 ಅಥವಾ ಗರಿಷ್ಟ ರೂ.2 ಲಕ್ಷಗಳ ಸಹಾಯಧನವನ್ನು ಸುಮಾರು 500 ಅರ್ಹ ಫಲಾನುಭವಿಗಳಿಗೆ ಸಣ್ಣ ಉದ್ಯಮಗಳ ಸ್ಥಾಪನೆಗಾಗಿ ನೀಡಲು ಉದ್ದೇಶಿಸಲಾಗಿದೆ ಎಂದರು.

ನಗರದಲ್ಲಿನ ಸುಮಾರು 2500 ಅರ್ಹ ವಸತಿ ರಹಿತ ಎಸ್ಸಿ, ಎಸ್ಟಿ, ವಿಶೇಷಚೇತನರು, ಆರ್ಥಿಕವಾಗಿ ಹಿಂದುಳಿದ ವರ್ಗದವರ, ಪಾಲಿಕೆಯ ಖಾಯಂ ಹಾಗೂ ನೇರ ವೇತನ ಪಾವತಿ ಪೌರಕಾರ್ಮಿಕರಿಗೆ ಸರ್ಕಾರದ ವಿವಿಧ ವಸತಿ ನಿರ್ಮಾಣ ಸಂಸ್ಥೆಗಳ ಸಹಯೋಗದೊಂದಿಗೆ “ಗೃಹ ಭಾಗ್ಯ ಯೋಜನೆ” ಯಡಿ ವಸತಿ ಸೌಲಭ್ಯವನ್ನು ಒದಗಿಸಲು 2025-26ನೆ ಸಾಲಿನ ಆಯವ್ಯಯದಲ್ಲಿ 130 ಕೋಟಿಗಳ ಅನುದಾನ ಮೀಸಲಿರಿಸಲಾಗಿದೆ.

ಈ ಆರ್ಥಿಕ ವರ್ಷದಲ್ಲಿ ಹೊಲಿಗೆ ತರಬೇತಿ ಪಡೆದ 1000 ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುವುದು. ಪಾಲಿಕೆ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಲು ರೂ.1 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಹಿರಿಯ ನಾಗರೀಕರಿಗೆ ಜೀವನೋಪಾಯ ವಸ್ತುಗಳನ್ನು ಒದಗಿಸಲು 2 ಕೋಟಿಗಳನ್ನು ಒದಗಿಸಲಾಗಿದೆ. ಯುವಜನತೆಯ ಕೌಶಲ್ಯಾಭಿವೃದ್ಧಿಗಾಗಿ 2025-26ನೆ ಸಾಲಿನ ಆಯವ್ಯಯದಲ್ಲಿ 5 ಕೋಟಿ ಅನುದಾನವನ್ನು ಮೀಸಲಿರಿಸಿದೆ ಎಂದು ಪ್ರಕಟಿಸಿದರು.

ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 2025-26 ನೇ ಸಾಲಿನ ಆಯವ್ಯಯದಲ್ಲಿ 10 ಕೋಟಿ ಅನುದಾನ, ನಿರಾಶ್ರಿತರ ರಾತ್ರಿ ತಂಗುದಾಣಗಳ ನಿರ್ವಹಣೆಗಾಗಿ 2025-26 ನೆ ಸಾಲಿನ ಆಯವ್ಯಯದಲ್ಲಿ 5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಪ್ರಕಟಿಸಿದರು.

ರೋಮಾಂಚಕ ಬೆಂಗಳೂರು..!

ಪಾಲಿಕೆ ವತಿಯಿಂದ 300 ಕೋಟಿಗಳಿಗೂ ಅಧಿಕ ಮೊತ್ತವನ್ನು ವಿದ್ಯುತ್ ಶುಲ್ಕಕ್ಕಾಗಿ ಬಳಕೆ ಮಾಡಲಾಗುತ್ತಿದ್ದು, 2024-25ನೆ ಸಾಲಿನಲ್ಲಿ ಈ ವೆಚ್ಚವನ್ನು ತಗ್ಗಿಸಲು ಮತ್ತು ಸಂಪ್ರಾದಾಯಿಕ ಸೋಡಿಯಂ ಮತ್ತು ಲೋಹದ ಹಾಲೈಡ್ ದೀಪಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಇಂಧನ ದಕ್ಷ ಬೆಳಕಿನ ಮೂಲ ಸೌಕರ್ಯವನ್ನು ಸೃಜಿಸಲು, ಎಲ್‍ಇಡಿ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರಿನ ಇಂಗಾಲದ ಹೆಜ್ಜೆ ಗುರುತು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

ಇದೇ ವಾರ್ಷಿಕ ಉಳಿತಾಯವಾಗುವ 100 ಕೋಟಿಗಳಲ್ಲಿ ವಿದ್ಯುತ್ ಮೂಲ ಸೌಕರ್ಯವನ್ನು ಬೆಂಗಳೂರು ನಗರದ ನಿವಾಸಿಗಳಿಗೆ ನೀಡುವ ಮೂಲಕ ರೋಮಾಂಚಕ ಬೆಂಗಳೂರು ಯೋಜನೆಯನ್ನು ಉತ್ತೇಜಿಸಲಾಗುವುದು ಎಂದು ಬಜೆಟ್‍ನಲ್ಲಿ ತಿಳಿಸಲಾಗಿದೆ.

ಎಐ ಟಚ್..!

ವಾಣಿಜ್ಯ ಮತ್ತು ಬೃಹತ್ ಕಟ್ಟಡಗಳ 3ಡಿ ಮಾಡೆಲಿಂಗ್ ಮತ್ತು ಐ.ಟಿ.-ಬೆಂಬಲಿತ ಸಂಯೋಜಿತ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಿಂದ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸಲಾಗಿದೆ.

ಕಂದಾಯ ಇಲಾಖೆಯ ದಿಶಾಂಕ್ ಅಪ್ಲಿಕೇಶನ್‍ನಂತೆಯೇ ನಾಗರಿಕರಿಗಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಆಸ್ತಿ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಮೋಸ ಹೋಗದಂತೆ ನಾಗರಿಕರನ್ನು ರಕ್ಷಿಸುತ್ತದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಆಸ್ತಿತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರನ್ನು ಗುರುತಿಸುವ ವ್ಯವಸ್ಥೆಯನ್ನು ಪರಿಚಯ ಮಾಡಲಾಗುವುದು. ಇದು ಆಸ್ತಿ ತೆರಿಗೆಯಲ್ಲಿ ವರ್ಷಕ್ಕೆ ಹೆಚ್ಚುವರಿಯಾಗಿ 1000 ಕೋಟಿಗಳನ್ನು ಗಳಿಸುವ ಪಾಲಿಕೆಯ ಪ್ರಯತ್ನಕ್ಕೆ ಪೂರಕವಾಗಿದೆ.

ನೀರಿಗಾಗಿ ಹಲವು ಕಾರ್ಯಕ್ರಮ :

* ಬೊಮ್ಮನಹಳ್ಳಿ ವಲಯದ ಕೆರೆ ಸೇರಿದಂತೆ ಎಲ್ಲ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ದಿ ಕಾಮಗಾರಿಗಳಿಗಾಗಿ 210 ಕೋಟಿ ಮೀಸಲು

* ಪಾಲಿಕೆಯ ವ್ಯಾಪ್ತಿಯಲ್ಲಿ ನೀರಿನ ಸಂರಕ್ಷಣೆ ಉತ್ತೇಜಿಸಲು, ಪಾಲಿಕೆಯ ಕಟ್ಟಡಗಳು ಮತ್ತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳ ಅನುಷ್ಟಾನ.

* 174 ಕಿ.ಮೀ ರಾಜಕಾಲುವೆಗೆ ಉದ್ದದ ತಡೆಗೋಡೆಯನ್ನು ಮುಂದಿನ 3 ವರ್ಷಗಳಲ್ಲಿ ನಿರ್ಮಿಸಲು ಪಣ

* ಬೆಂಗಳೂರು ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕೈಗೆತ್ತಿಕೊಳ್ಳಲು 247.25 ಕೋಟಿಗಳ ವೆಚ್ಚದಲ್ಲಿ ಕಾಮಗಾರಿ

8 ವಲಯ ಆಯುಕ್ತ ನೇಮಕ

ಬಿಬಿಎಂಪಿ ಅಧಿಕಾರ ಮತ್ತು ಆರ್ಥಿಕ ವಿಕೇಂದ್ರಿಕರಣದ ಭಾಗವಾಗಿ ವಲಯಗಳಲ್ಲಿನ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಎಲ್ಲ 8 ವಲಯಗಳಲ್ಲೂ ಹಿರಿಯ ಐಎಎಸ್ ಅಧಿಕಾರಿಗಳನ್ನು ವಲಯ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಎಲ್ಲ ವಲಯ ಆಯುಕ್ತರು ಹಾಗೂ ಇತರೇ ಅಧಿಕಾರಿಗಳಿಗೆ ಹಣಕಾಸು ಹಾಗೂ ತಾಂತ್ರಿಕ ವಿಷಯಗಳಲ್ಲಿ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ. ಜತೆಗೆ, ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಿಸಲು ಹಾಗೂ ಸ್ಥಳೀಯ ಯೋಜನೆ ಮತ್ತು ವಾರ್ಡ್ ಸಮಿತಿಗಳ ಪಾತ್ರಗಳನ್ನು ನಾಗರೀಕರು ಅವಲೋಕಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020ರ ಕಾಯ್ದೆ ಅನುಸಾರ ರೂಪುಗೊಂಡ 225 ವಾರ್ಡುಗಳ ಆಡಳಿತ ಮತ್ತು ನಿರ್ವಹಣೆಗಾಗಿ ಪ್ರತಿಯೊಂದು ವಲಯದಲ್ಲಿಯೂ ವಲಯ ಸಮಿತಿ ರಚಿಸಿ, ಅದರಂತೆ ಪ್ರತಿ ವಾರ್ಡ್‍ನಲ್ಲಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಈ ನೋಡಲ್ ಅಧಿಕಾರಿಗಳು ಪ್ರತಿ ಬುಧವಾರ ವಾರ್ಡ್ ಮಟ್ಟದಲ್ಲಿ ಇತರ ಅಧಿಕಾರಿಗಳೊಂದಿಗೆ ಹಾಜರಿದ್ದು, ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸುತ್ತಿರುತ್ತಾರೆ. ಈಗಾಗಲೇ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳ ಕರಡು ತಿದ್ದುಪಡಿ ಪ್ರಸ್ತಾವನೆ ತಯಾರಿಸಿದ್ದು, ಸದರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳ ಕರಡು ತಿದ್ದುಪಡಿ ಪ್ರಸ್ತಾವನೆ ತಯಾರಿಸಿದ್ದು, ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ

ಈ ಬಾರಿ 4900 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸಿದ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಲಿಷ್ಟ ವ್ಯವಸ್ಥೆಗಳು ಮತ್ತು ಕಾರ್ಯ ವಿಧಾನವನ್ನು ಹೊಂದಿರುವ ಅತ್ಯಾಧುನಿಕ ಸೌಲಭ್ಯಗಳ ಐ.ಟಿ. ಕೋಶವನ್ನು ಪಾಲಿಕೆಯಲ್ಲಿ ಆರಂಭಿಸಲಾಗಿದೆ. ಸಂಪರ್ಕರಹಿತ ಆನ್‍ಲೈನ್ ಇ-ಖಾತಾ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ 25 ಲಕ್ಷಕ್ಕೂ ಹೆಚ್ಚು ಕೈಬರಹದ ಖಾತಾಗಳು ಆನ್‍ಲೈನ್ ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿದೆ.

ಖಾತೆ ವ್ಯವಸ್ಥೆಯು ಆಧಾರ್ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು ಇದು ಬ್ಲಾಕ್ ಚೈನ್ ತಂತ್ರಜ್ಞಾನದ ಸುರಕ್ಷತೆಯನ್ನು ಹೊಂದಿರುತ್ತದೆ. ಹಾಗೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2023-24 ನೇ ಹಣಕಾಸು ವರ್ಷದಲ್ಲಿ ದೇಶದಲ್ಲೇ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವನ್ನು ಸಾಧಿಸಿದ್ದು, ಒಟ್ಟಾರೆ ರೂ.3944 ಕೋಟಿ ಸಂಗ್ರಹವಾಗಿದೆ.

ಫೆಬ್ರವರಿ-2025 ರ ಅಂತ್ಯಕ್ಕೆ ರೂ.4541.75 ಕೋಟಿಗಳಷ್ಟು ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಒಂದು ಬಾರಿ ಪರಿಹಾರ (ಒನ್ ಟೈಮ್ ಸೆಟಲೈಂಟ್) ಯೋಜನೆ ಅದ್ಭುತ ಯಶಸ್ಸನ್ನು ಕಂಡಿದ್ದು, ಒಂದೇ ವರ್ಷದಲ್ಲಿ 1,277 ಕೋಟಿ ಬಾಕಿ ವಸೂಲಿ ಮಾಡಲಾಗಿದ್ದು, ಇದು ದಾಖಲೆಯ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಆಸ್ತಿ ನಿರ್ವಹಣೆ) ನಿಯಮಗಳು-2024 ಅನ್ನು ಘೋಷಿಸಲಾಗಿದೆ ಮತ್ತು 6818 ಆಸ್ತಿಗಳ ಸರಿಯಾದ ನಿರ್ವಹಣೆಯ ಜೊತೆಗೆ ಸುಮಾರು 100 ಕೋಟಿ ಗುತ್ತಿಗೆ ಆದಾಯವನ್ನು ನಿರೀಕ್ಷಿಸಲಾಗಿದೆ.

ಬಿಬಿಎಂಪಿ ಬಜೆಟ್‍ನಲ್ಲಿ ಗಮನ ಸೆಳೆದ ಕವಿಗಳ ಬರಹ: ಹರೀಶ್ ಕುಮಾರ್ ಅವರು ಹಿರಿಯ ಸಾಹಿತಿ ಎಂ.ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಎಂಬ ಹಾಡಿನ ಸಾಲು ಹಾಗೂ ಅದೇ ರೀತಿ, ಹಿರಿಯ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರ ‘ಒಂದೆದೆಯ ಹಾಲ ಕುಡಿದವರು ನಡುವೆ ಎಷ್ಟೊಂದು ಭೇದ ತಾಯಿ, ಒಂದೇ ನೆಲದ ರಸ ಹೀರಲೇನು, ಸಿಹಿ ಕಹಿಯ ರುಚಿಯ ಕಾಯಿ, ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ, ಇನ್ನೊಬ್ಬ ತಾನು ಆಚರಿಸುತ್ತಿರುವ ವೈಭವದ ಹುಟ್ಟಹಬ್ಬ’ ಸಾಲುಗಳನ್ನು ಪಠಿಸಿದರು.

ಜತೆಗೆ ‘ಮಣಿಯದಿಹ ಮನವೊಂದು, ಸಾಧಿಸುವ ಹಠವೊಂದು…ನಿಜದ ನೇರಕೆ ನಡೆವ ನಿಶ್ಚಲತೆಯೊಂದು’ ಎಂಬ ಕವಿವಾಣಿಯನ್ನು, ಬದ್ಧತೆಯಿದ್ದಲ್ಲಿ ಏನನ್ನೂ ಸಾಧಿಸಬಹುದೆಂಬ ನಂಬಿಕೆಯೊಂದಿಗೆ ಈ ಆಯವ್ಯಯದ ಪ್ರಸ್ತುತಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ ಎಂದು ತಮ್ಮ ಚೊಚ್ಚಲ ಬಿಬಿಎಂಪಿ ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News