ಅಮಾವಾಸ್ಯೆ, ಹುಣ್ಣಿಮೆ, ಗ್ರಹಣಗಳಿಂದ ಸಮಸ್ಯೆ ಆಗುವುದಿಲ್ಲ: ಬಿ.ಟಿ.ಲಲಿತಾ ನಾಯಕ್

Update: 2025-03-29 21:33 IST
ಅಮಾವಾಸ್ಯೆ, ಹುಣ್ಣಿಮೆ, ಗ್ರಹಣಗಳಿಂದ ಸಮಸ್ಯೆ ಆಗುವುದಿಲ್ಲ: ಬಿ.ಟಿ.ಲಲಿತಾ ನಾಯಕ್
  • whatsapp icon

ಬೆಂಗಳೂರು : ಅಮಾವಾಸ್ಯೆ, ಹುಣ್ಣಿಮೆ, ಗ್ರಹಣಗಳೆಲ್ಲವೂ ಸೌರವ್ಯೂಹದಲ್ಲಿ ನಡೆಯುವ ಪ್ರಕೃತಿಯ ಚಲನೆಗಳು. ಇದರಿಂದ ಯಾರಿಗೂ ಸಮಸ್ಯೆ ಆಗುವುದಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ತಿಳಿಸಿದ್ದಾರೆ.

ಶನಿವಾರ ನಗರದ ಪುರಭವನದ ಮುಂಭಾಗದಲ್ಲಿ ‘ಸೂರ್ಯ ಗ್ರಹಣ’ದ ಪ್ರಯುಕ್ತ ಜನರಲ್ಲಿರುವ ಮೌಢ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸುವ ಸಲುವಾಗಿ ‘ಮೂಢನಂಬಿಕೆ ವಿರೋಧಿ ಒಕ್ಕೂಟದ’ ವತಿಯಿಂದ ನಡೆದ ‘ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಮಾವಾಸ್ಯೆ, ಹುಣ್ಣಿಮೆ, ಗ್ರಹಣದ ದಿನಗಳಲ್ಲಿ ಮನೆಯಿಂದ ಹೊರಗೆ ಹೋಗಬಾರದೆನ್ನುವ ಕಟ್ಟಲೆಗಳನ್ನು ಹಾಕಿಕೊಂಡು, ಶಾಸ್ತ್ರಗಳನ್ನು ಸೃಷ್ಟಿಮಾಡಿ ಅವುಗಳನ್ನು ಪಾಲಿಸಿದಿದ್ದರೆ ಒಳಿತಾಗುವುದಿಲ್ಲ ಎನ್ನುವ ಭೀತಿಯನ್ನು ಜನರಲ್ಲಿ ಹುಟ್ಟಿಸಲಾಗಿದೆ. ಜನರು ಸ್ವತಂತ್ರವಾಗಿ ಚಿಂತಿಸಲು ಸಾಧ್ಯವಾಗದ ರೀತಿಯಲ್ಲಿ ಪುರೋಹಿತಶಾಹಿಗಳು, ಜ್ಯೋತಿಷ್ಯರು ಮಾಡಿದ್ದಾರೆ. ಇಂದು ಸಮಾಜದಲ್ಲಿ ಮೌಢ್ಯ, ಮೂಢನಂಬಿಕೆಗಳು ಎಗ್ಗಿಲ್ಲದಂತೆ ಹರಡುತ್ತಿವೆ. ಅಂತಹ ಮೌಢ್ಯವನ್ನು ಬಿತ್ತುವವರ ವಿರುದ್ಧ ನಿರಂತರ ಹೋರಾಟ ಮಾಡಬೇಕು. ಜನರಿಗೆ ವೈಜ್ಞಾನಿಕತೆಯ ಅರಿವು ಮೂಡಿಸಬೇಕು ಎಂದು ಲಲಿತಾ ನಾಯಕ್ ತಿಳಿಸಿದರು.

ವಕೀಲ ನರಸಿಂಹಮೂರ್ತಿ ಮಾತನಾಡಿ, ಕೋಟ್ಯಾಂತರ ವರ್ಷಗಳಿಂದ ಗ್ರಹಣಗಳು ನಡೆಯುತ್ತಿವೆ. ಇದೆಲ್ಲವೂ ಪ್ರಕೃತಿಯ ನಿಯಮ. ಗ್ರಹಣದಿಂದ ಜನರಿಗೆ ಯಾವ ತೊಂದರೆಯೂ ಇಲ್ಲ. ಆದರೂ, ಜನ ಭಯಭೀತರಾಗಿ ಬದುಕುತ್ತಿದ್ದಾರೆ. ಜ್ಯೋತಿಷ್ಯರು ಗ್ರಹಣ ಸಂದರ್ಭದಲ್ಲಿ ಊಟ, ನೀರು ಸೇವಿಸಬಾರದು, ಮನೆಯಿಂದ ಹೊರಬಾರದು ಎನ್ನುವ ಮೌಢ್ಯವನ್ನು ಜನರಲ್ಲಿ ಬಿತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಖಂಡಿಸಿದರು.

ಕಾರ್ಯಕ್ರಮದಲ್ಲಿ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆಗಳಿಗೆ ಸಮಾಜದಲ್ಲಿ ಮೂಢನಂಬಿಕೆಯನ್ನು ಬಿತ್ತಿರುವುದನ್ನು ವಿರೋಧಿಸಿ, ವೆಜಿಟೆಬಲ್ ಪಲಾವ್, ಒಬ್ಬಟ್ಟು, ಸಮೋಸ, ಹಣ್ಣುಗಳು, ಬಿಸ್ಕೇಟ್ ಮತ್ತು ಇನ್ನಿತರ ತಿಂಡಿ-ತಿನಿಸುಗಳನ್ನು ತಿನ್ನುತ್ತಾ ‘ನಮ್ಮ ನಡಿಗೆ ವಿಜ್ಞಾನದೆಡೆಗೆ, ಮೌಢ್ಯ ತೊಳಗಲಿ-ವಿಜ್ಞಾನ ಬೆಳಗಲಿ’ ಎಂದು ಘೋಷಣೆಗಳನ್ನು ಕೂಗಲಾಯಿತು.

ಇದೇ ವೇಳೆಯಲ್ಲಿ ನಟ ಚೇತನ್ ಅಹಿಂಸಾ, ವಿಚಾರವಾದಿ ಟ್ರಸ್ಟ್ ಕಾರ್ಯದರ್ಶಿ ನಾಗೇಶ್ ಅರಳಕುಪ್ಪೆ, ಮಹಿಳಾ ಹೋರಾಟಗಾರ್ತಿ ಗೌರಿ, ಕರ್ನಾಟಕ ಜನಶಕ್ತಿ ಗೌರವಾಧ್ಯಕ್ಷ ಪ್ರೊ.ನಗರಗೆರೆ ರಮೇಶ್, ಜನಶಕ್ತಿ ಸಂಘಟನೆಯ ರವಿ ಮೋಹನ್, ಮಲ್ಲು ಕುಂಬಾರ್, ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News