ಮುಡಾ ಪ್ರಕರಣ | ಈಡಿ ತನಿಖೆಗೆ ಮುಂದಾದರೆ ನ್ಯಾಯಾಂಗ ನಿಂದನೆ: ಎ.ಎಸ್.ಪೊನ್ನಣ್ಣ
ಎ.ಎಸ್.ಪೊನ್ನಣ್ಣ
ಬೆಂಗಳೂರು : ಮೈಸೂರಿನ ಮುಡಾದಿಂದ ಹಂಚಿಕೆಯಾಗಿದ್ದ 14 ನಿವೇಶನಗಳ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ನೋಟಿಸ್, ಸಮನ್ಸ್ ನೀಡುವುದು ಅಥವಾ ತನಿಖೆ ಮಾಡಲು ಮುಂದಾದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ ಹಂಚಿಕೆಯಾದ 14 ನಿವೇಶನಗಳನ್ನು ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ವಾಪಸ್ ನೀಡಿದ್ದಾರೆ. ಇದನ್ನು ಬೇರೆಯವರಿಗೆ ಮಾರಾಟ ಅಥವಾ ಪರಭಾರೆ ಮಾಡುವುದಾಗಲೀ ನಡೆದಿಲ್ಲ. ಹೀಗಾಗಿ ಇಲ್ಲಿ ಹಣದ ವಹಿವಾಟು ಇಲ್ಲ. ಮನಿ ಲ್ಯಾಂಡ್ರಿಂಗ್ ಕಾಯ್ದೆ ಅನ್ವಯಿಸುವುದಿಲ್ಲ ಎಂದರು.
ಮುಡಾ ಪ್ರಕರಣದಲ್ಲಿ ದಾಖಲಿಸಿದ್ದ ಇಸಿಐಆರ್ ಅನ್ನು ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆದು ಇಸಿಐಆರ್ ಅನ್ನು ರದ್ದುಗೊಳಿಸಲಾಗಿದೆ. ಪ್ರಕರಣದಲ್ಲಿ ಹೆಸರಿಸಲಾದ ಎಲ್ಲರಿಗೂ ತೀರ್ಪು ಅನ್ವಯವಾಗುತ್ತದೆ. ಹೀಗಾಗಿ ಮತ್ತೆ ಸಿದ್ದರಾಮಯ್ಯನವರಿಗೆ ನೋಟಿಸ್ ಅಥವಾ ಸಮನ್ಸ್ ನೀಡುವುದಾಗಲೀ ಮಾಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅವರು ಉಲ್ಲೇಖಿಸಿದರು.
ನಟೇಶ್ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮುಡಾ ಪ್ರಕರಣದಲ್ಲಿ ನಿವೇಶನ 50:50 ಅನುಪಾತ ಹಾಗೂ ಇತರ ಸಂದರ್ಭದಲ್ಲಿ ತನಿಖೆ ನಡೆಸಲು ನಟೇಶ್ ಪ್ರಕರಣದಲ್ಲಿ ನೀಡಲಾಗಿರುವ ತಡೆಯಾಜ್ಞೆ ಅಡ್ಡ ಬರುತ್ತಿದೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು.ಇದಕ್ಕೆ ಸ್ಪಷ್ಟನೆ ನೀಡಿದ ನ್ಯಾಯಾಲಯ ನಟೇಶ್ ಪ್ರಕರಣದಲ್ಲಿ ಮಾತ್ರ ತಡೆಯಾಜ್ಞೆಯಿದೆ.
ಉಳಿದ ಯಾವುದೇ ವಿಚಾರಣೆಗೆ ತಡೆಯಾಜ್ಞೆ ಇಲ್ಲ. ಪ್ರತಿ ತೀರ್ಪು ಕೂಡ ವಾದಿ ಮತ್ತು ಪ್ರತಿವಾದಿಗಳ ಸೀಮಿತ ವ್ಯಾಪ್ತಿಗೆ ಒಳಗೊಂಡಿರುತ್ತದೆ ಎಂದು ಸ್ಪಷ್ಟನೆ ನೀಡಿದೆ. ಇದನ್ನು ರಾಜಕೀಯವಾಗಿ ಬೇರೆ ರೀತಿ ಅರ್ಥೈಸಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ನ್ಯಾಯಾಲಯ ಒಪ್ಪಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ವಿವರಿಸಿದರು.