ರಾಜ್ಯದಲ್ಲಿ ಮಳೆ: ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಸ್ವಲ್ಪ ನಿಟ್ಟುಸಿರು
ಬೆಂಗಳೂರು : ಹವಾಮಾನ ಇಲಾಖೆಯ ಮೂನ್ಸೂಚನೆಯಂತೆ ಗುರುವಾರದಂದು ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಬಿಸಿಲು-ಸೆಕೆಯಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದರೂ ಬೆಂಗಳೂರಿನ ಜನರು ಪ್ರತಿ ಬಾರಿಯಂತೆ ಈ ಬಾರಿಯೂ ಮಳೆಯಿಂದ ಕಿರಿಕಿರಿ ಅನುಭವಿಸಬೇಕಾಯಿತು.
ನಗರದಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ ಮೆಜೆಸ್ಟಿಕ್, ವಿಧಾನಸೌಧ, ಶಾಂತಿನಗರ, ರಿಚ್‍ಮಂಡ್ ಟೌನ್, ಜಯನಗರ, ಕೆ.ಆರ್.ಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಧ್ಯಾಹ್ನದ ಮಳೆ ಹಲವರಿಗೆ ಕಿರಿಕಿರಿ ಉಂಟು ಮಾಡಿದೆ. ಸಣ್ಣ ಮಳೆಗೆ ನಗರದ ಕೆಲ ಪ್ರದೇಶಗಳು ಕೆರೆಯಂತಾಗಿದ್ದವು.
ಮಹದೇವಪುರದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿಟಿಎಂ ಲೇಔಟ್‍ನ ತಾವರೆಕೆರೆ ರಸ್ತೆ ಜಲಾವೃತಗೊಂಡಿತ್ತು. ಮಳೆಯ ನೀರಿನಲ್ಲೇ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ದೃಷ್ಯಗಳು ಕಂಡುಬಂದವು. ಈಜೀಪುರ ಮುಖ್ಯ ರಸ್ತೆಯಲ್ಲಿ ಕಟ್ಟಡವೊಂದರ ನೆಲ ಮಹಡಿ ಜಲಾವೃತಗೊಂಡು, ಎರಡು ಅಡಿಯಷ್ಟು ನೀರು ನಿಂತಿತ್ತು.
ರಾಜಾಜಿನಗರದಲ್ಲಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ನೆಲಕ್ಕೆ ಅಪ್ಪಳಿಸಿದ್ದು, ರಸ್ತೆ ಬದಿ ನಿಂತಿದ್ದ ಸ್ಕಾರ್ಫಿಯೋ ಮತ್ತು ಸ್ವಿಫ್ಟ್ ಕಾರುಗಳು ಜಖಂಗೊಂಡಿವೆ. ನಗರದಲ್ಲಿ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿತ್ತು. ರಸ್ತೆಗಳಲ್ಲಿ ಮಳೆ ನೀರು ನಿಂತ ಹಿನ್ನೆಲೆ ಔಟರ್‍ರಿಂಗ್ ರಸ್ತೆಯಲ್ಲಿ ಕೆಲಕಾಲ ವಾಹನ ದಟ್ಟನೆ ಉಂಟಾಗಿತ್ತು.
ಗುರುವಾರದಂದು ಉಡುಪಿ ಜಿಲ್ಲೆಯಲ್ಲಿ 10.6ಎಂಎಂ, ದಕ್ಷಿಣ ಕನ್ನಡ 7ಎಂಎಂ, ಉತ್ತರ ಕನ್ನಡ 3.1 ಎಂಎಂ, ಗದಗ 12 ಎಂಎಂ, ರಾಯಚೂರು 2.2 ಎಂಎಂ, ಬಾಗಲಕೋಟೆ 1.6ಎಂಎಂ, ಮೈಸೂರು 11.2 ಎಂಎಂ, ಚಿತ್ರದುರ್ಗ 3.4 ಎಂಎಂ, ಶಿವಮೊಗ್ಗ ಜಿಲ್ಲೆಯಲ್ಲಿ 1 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ 12 ಮರಗಳು ಹಾಗೂ 41 ರಂಬೆ-ಕೊಂಬೆಗಳು ಧರೆಗೆ ಉರುಳಿವೆ. 6 ಮರಗಳು ಸೇರಿ 27 ಕೊಂಬೆಗಳನ್ನು ತೆರವು ಮಾಡಲಾಗಿದ್ದು, ಉಳಿದ ಮರ ಹಾಗೂ ರಂಬೆ-ಕೊಂಬೆಗಳನ್ನು ತೆರವು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.