ʼಬೆಲೆ ಏರಿಕೆʼ ತಾರ್ಕಿಕ ಅಂತ್ಯಕ್ಕೆ ಬಿಜೆಪಿ ಹೋರಾಟ: ಆರ್.ಅಶೋಕ್

Update: 2025-04-03 21:06 IST
ʼಬೆಲೆ ಏರಿಕೆʼ ತಾರ್ಕಿಕ ಅಂತ್ಯಕ್ಕೆ ಬಿಜೆಪಿ ಹೋರಾಟ: ಆರ್.ಅಶೋಕ್
  • whatsapp icon

ಬೆಂಗಳೂರು : ಕಾಂಗ್ರೆಸ್‍ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತಿಸುತ್ತಿದ್ದಾರೆ. ಸರಕಾರದ ಬೆಲೆ ಏರಿಕೆಯ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ಮೂಲಕ ಕಳ್ಳತನ ಮಾಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಕಮಿಶನ್ ಮೂಲಕ ಕಳ್ಳತನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸತ್ತಾಗ ಹೆಣದ ಮೇಲೆ ಹಣ ಹಾಕುವ ಪದ್ಧತಿ ಇದೆ. ಕಾಂಗ್ರೆಸ್ ಸರಕಾರ ಮರಣ ಪ್ರಮಾಣ ಪತ್ರಕ್ಕೂ ಶುಲ್ಕ ಏರಿಸಿ ಹಣ ಸಂಗ್ರಹ ಮಾಡುತ್ತಿದೆ. ಮದ್ಯದ ದರವನ್ನೂ ಏರಿಸಿ ಮದ್ಯಪ್ರಿಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಶೌಚಾಲಯ ನಿರ್ವಹಣೆ ಮಾಡಲು ಕೂಡ ಸರಕಾರದ ಬಳಿ ದುಡ್ಡಿಲ್ಲ. ಬೆಂಗಳೂರಿನ ಜನರಿಗೆ ಮುಂದೆ ನೀರಿನ ಶುಲ್ಕ ಏರಿಕೆಯ ಶಾಕ್ ಕೂಡ ಕಾದಿದೆ ಎಂದು ಆರ್.ಅಶೋಕ್ ಹೇಳಿದರು.

ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರಕಾರ, ಪತ್ನಿಗೆ ಸಹಾಯಧನ ನೀಡಿ, ಪತಿಯಿಂದ ಹಣ ವಸೂಲಿ ಮಾಡಲಾಗುತ್ತಿದೆ. ಆಯವ್ಯಯದಲ್ಲಿ ಜನರ ಮೇಲೆ ಹಾಕುವ ತೆರಿಗೆಗಳ ಬಗ್ಗೆ ಸರಿಯಾಗಿ ತಿಳಿಸಬೇಕಿತ್ತು. ಆದರೆ, ಬಜೆಟ್ ಮುಗಿದ ನಂತರ ತೆರಿಗೆಗಳನ್ನು ಏರಿಸಲಾಗಿದೆ. ವಕ್ಫ್ ಮಂಡಳಿ ರೈತರ ಜಮೀನುಗಳನ್ನು ಕಬಳಿಸುತ್ತಿತ್ತು. ಅದನ್ನು ತಡೆಯಲು ಪ್ರಧಾನಿ ಮೋದಿಯವರು ಕಾಯ್ದೆ ತಿದ್ದುಪಡಿ ತಂದಿದ್ದಾರೆ. ಆದರೆ ಇದನ್ನು ಕೂಡ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಆರ್.ಅಶೋಕ್ ತಿಳಿಸಿದರು.

ಬಿಜೆಪಿ ನಾಯಕರು ಪ್ರತಿಭಟಿಸಿದಾಗ ಬಸ್‍ಗಳನ್ನು ತಂದು ಅದರಲ್ಲಿ ಬಂಧಿಸಿ ಇರಿಸಲಾಗುತ್ತದೆ. ಆದರೆ ಈಗ ಬಸ್‍ಗಳಿಗೆ ಕೊರತೆ ಇದೆ. ಬಸ್ ತರುವ ಯೋಗ್ಯತೆಯೂ ಸರಕಾರಕ್ಕೆ ಇಲ್ಲ ಎಂದು ಆರ್.ಅಶೋಕ್ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News