ಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ : ಬಿ.ವೈ.ವಿಜಯೇಂದ್ರ
ಬೆಂಗಳೂರು : ದುರಂತ ಎಂದರೆ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ 20 ತಿಂಗಳಲ್ಲಿ ಕಳಚಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕಾಗಿತ್ತು. ದುರಂತ ಎಂದರೆ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ 20 ತಿಂಗಳಲ್ಲಿ ಕಳಚಿ ಬಿದ್ದಿದೆ ಎಂದರು.
ನಾನು ಈ ವೇದಿಕೆಯ ಮೂಲಕ ಪ್ರಶ್ನಿಸುತ್ತೇನೆ. ಸಿದ್ದರಾಮಯ್ಯನವರೇ, ಅಧಿಕಾರಕ್ಕೆ ಬರುವ ಮುನ್ನಾ ಇದ್ದ ಕಾಳಜಿ ಈಗ ಏಕಿಲ್ಲ?, ವಿಪಕ್ಷದಲ್ಲಿದ್ದಾಗ ಇದ್ದ ಕಾಳಜಿ ಈಗ್ಯಾಕೆ ಇಲ್ಲ?, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅಹಿಂದ ಅಹಿಂದ ಎಂದು ಹೇಳುತ್ತಿದ್ದೀರಿ. ಅಧಿಕಾರಕ್ಕೆ ಬಂದ ಮೇಲೆ ಯಾವ ಅಹಿಂದವೂ ಇಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ರಾಜ್ಯದ ಭಂಡ ಸರಕಾರ, ಭಂಡ ಮುಖ್ಯಮಂತ್ರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡದೇ ಬೇರೆ ದಾರಿ ಇಲ್ಲ. ನಮ್ಮ ಹೋರಾಟ ಎರಡು ದಿನಗಳಿಂದ ಆರಂಭವಾಗಿದೆ. ಇದು ಪ್ರಾರಂಭ ಅಷ್ಟೇ. ನಾಡಿನ ಜನರ ಪರವಾಗಿ ವಿಪಕ್ಷವಾದ ನಾವು ಹೋರಾಟ ಮಾಡುವುದು ಅನಿವಾರ್ಯ ಎಂದು ವಿಜಯೇಂದ್ರ ತಿಳಿಸಿದರು.
ಮೊದಲೇ ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಡೀಸೆಲ್‍ಗೆ 2 ರೂ. ಹೆಚ್ಚಿಸಿದ ದುಷ್ಟರಿವರು. ಇದು ಅಧಿಕಾರದ ಮದ. ಅಹೋರಾತ್ರಿ ಧರಣಿಯು ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಉತ್ಸಾಹ ತಂದು ಕೊಟ್ಟಿದೆ. ರೈತ ನಾಯಕ, ಹೋರಾಟಗಾರ ಯಡಿಯೂರಪ್ಪ ಅವರು ಸಹ ಹೋರಾಟದ ನೇತೃತ್ವ ವಹಿಸಿ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಪಟ್ಟಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಈ ಮೂಲಕ ಇಡೀ ರಾಜ್ಯಕ್ಕೆ ನಮ್ಮ ಹೋರಾಟಕ್ಕೆ ಕಿಚ್ಚು ಹಚ್ಚಿದಂತಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ನೇಕಾರರು, ಸವಿತಾ, ಈಡಿಗ, ಮೀನುಗಾರರ ಸಮಾಜ ಹೀಗೆ ಎಲ್ಲವನ್ನೂ ಸಿದ್ದರಾಮಯ್ಯ ಅವರು ತುಳಿದಿದ್ದಾರೆ. ಹಿಂದುಳಿದ ಸಮಾಜವನ್ನು ನೋಡಲಿಲ್ಲ. ಕೇವಲ ಮುಸ್ಲಿಮರ ಹಿಂದೆ ಹೋಗಿದ್ದಾರೆ. ಎಲ್ಲವನ್ನೂ ಜನರಿಗೆ ತಿಳಿಸಬೇಕಾಗಿದೆ. ಎ.7ರಿಂದ ಪ್ರಾರಂಭವಾಗುವ ಜನಾಕ್ರೋಶ ಯಾತ್ರೆ ಮೂಲಕ ರಾಜ್ಯದ ಪ್ರತಿ ಜಿಲ್ಲೆಗೆ ತಲುಪಲಿದ್ದೇವೆ. ಕಾಂಗ್ರೆಸ್ ಸರಕಾರದ ಹಗಲು ದರೋಡೆಯನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಈ ಸರಕಾರದ ನೈಜ ಮುಖವಾಡವನ್ನು ತಿಳಿಸುವ ಕೆಲಸವನ್ನು ಮುಂದಿನ ಒಂದು ತಿಂಗಳು ಮಾಡಲಿದ್ದೇವೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಐತಿಹಾಸಿಕ ಕ್ಷಣ..!
ವಕ್ಫ್ ಕಾಯಿದೆಗೆ ತಿದ್ದುಪಡಿಯನ್ನು ವಿರೋಧಿಸುವುದು ಒಂದು ದುರಂತ. ಕರ್ನಾಟಕದಲ್ಲಿ ಸಾವಿರಾರು ಕೋಟಿ ಮೌಲ್ಯದ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು, ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ಇಂಥ ಕಾಂಗ್ರೆಸ್ ಮುಖಂಡರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಮಂಡಳಿ ಹೆಸರಿನಲ್ಲಿ ಜನರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸಲು ಸಂಸತ್ತಿನ ಉಪಸಮಿತಿ ರಚಿಸಿದ್ದರು. ಇದೀಗ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಮಂಜೂರಾತಿ ಕೊಟ್ಟಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.