ಮುಂಗಾರು ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಲು ತುಷಾರ್ ಗಿರಿನಾಥ್ ಸೂಚನೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಗಾರು ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಗುರುವಾರ ಇಲ್ಲಿನ ಬಿಬಿಎಂಪಿ ಕೇಂದ್ರ ಕಛೇರಿಯ ನೌಕರರ ಸಭಾಂಗಣದಲ್ಲಿ ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು, ಎಲ್ಲ ಅಧಿಕಾರಿಗಳು ವಿಪತ್ತು ನಿರ್ವಹಣೆ ಕಾಯ್ದೆಯಡಿ ಅಗತ್ಯ ಕ್ರಮಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಹಿಂದಿನ ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಯಾಗಿದ್ದ ಪ್ರದೇಶಗಳಲ್ಲಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅದರಂತೆ, ಸಾಯಿ ಲೇಔಟ್, ಪೈ ಲೇಔಟ್, ಕೇಂದ್ರೀಯ ವಿಹಾರ್ ಅಪಾಟ್ಮೆರ್ಂಟ್, ಕೋಗಿಲು ಕ್ರಾಸ್, ಸರ್ಜಾಪುರ ರಸ್ತೆ (ಇಬ್ಬಲೂರು ಜಂಕ್ಷನ್), ಅಬ್ಬಿಗೆರೆ ಕೆರೆ ಕೋಡಿ, ಮೈಸೂರು ರಸ್ತೆ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಳೆಗಾಲ ಪ್ರಾರಂಭಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ನಗರದಲ್ಲಿ 198 ಪ್ರವಾಹ ಪೀಡಿತ ಪ್ರದೇಶಗಳ ಜೊತೆಗೆ ಹೊಸದಾಗಿ 11 ಪ್ರದೇಶಗಳು ಸೇರಿದಂತೆ ಒಟ್ಟು 209 ಪ್ರವಾಹ ಪೀಡಿದ ಪ್ರದೇಶಗಳಿವೆ. ಈ ಸಂಬಂಧ ಈಗಾಗಲೇ 166 ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಕಿ 43 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಖುದ್ದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಸೂಚನೆ ನೀಡಿದರು.
ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ: ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 180 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗವು ಗುರುತಿಸಿದ್ದು, ಈ ಪೈಕಿ ಸಂಬಂಧಪಟ್ಟ ಇಂಜಿನಿಯರ್‍ಗಳು ಸಂಚಾರಿ ಪೊಲೀಸ್ ವಿಭಾಗ ನೀಡಿರುವ ಪಟ್ಟಿ ಅನುಸಾರ ಸ್ಥಳ ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಬೇಕು. ಜೊತೆಗೆ ರಸ್ತೆ ಬದಿ ಅಳವಡಿಸಿರುವಂತಹ ಗ್ರೇಟಿಂಗ್ಸ್‍ಗಳ ಬಳಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಸೈಡ್ ಡ್ರೈನ್‍ಗಳಿಗೆ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಗ್ನಿ ಶಾಮಕ ಠಾಣೆಗಳ ಜೊತೆ ಸಂಪರ್ಕದಲ್ಲಿರಿ: ಪಾಲಿಕೆ ವ್ಯಾಪ್ತಿಯಲ್ಲಿ 20 ಅಗ್ನಿ ಶಾಮಕ ಠಾಣೆಗಳು ಹಾಗೂ ಎಸ್.ಡಿ.ಆರ್.ಎಫ್ ನ ಒಂದು ಕಂಪನಿ ಇದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಅಗ್ನಿ ಶಾಮಕ ಠಾಣೆಗಳ ಜೊತೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿರಬೇಕು. ಜೊತೆಗೆ ಅಗ್ನಿ ಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳ ಪಟ್ಟಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅದಲ್ಲದೆ ಜಲಮಂಡಳಿಯ ಸೂಪರ್ ಸಕ್ಕರ್ ಹಾಗೂ ಜಟ್ಟಿಂಗ್ ಯಂತ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಪಟ್ಟಿಯನ್ನು ಪಡೆದುಕೊಂಡಿರಬೇಕು ಎಂದು ಅವರು ಹೇಳಿದರು.
ರಾಜಕಾಲುವೆಗಳಲ್ಲಿ ಹೂಳೆತ್ತಲು ಸೂಚನೆ: ರಾಜಕಾಲುವೆಗಳಲ್ಲಿ ಜೆ.ಸಿ.ಬಿ.ಗಳ ಮೂಲಕ ನಿರಂತರವಾಗಿ ಹೂಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಬೇಕು. ರಾಜಕಾಲುವೆಗಳಲ್ಲಿ ಸ್ವಚ್ಚತೆ ಮಾಡಲು 2 ತಿಂಗಳ ಯೋಜನೆ ರೂಪಿಸಿ ಪಟ್ಟಿಯನ್ನು ನೀಡಬೇಕು. ಮಳೆ ನೀರು ಎಲ್ಲ ಕಡೆ ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.