ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ ಪಠ್ಯ ಮುದ್ರಣ ಸ್ವಾಗತಾರ್ಹ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ತಾಂತ್ರಿಕ ಶಿಕ್ಷಣ ಪಠ್ಯವನ್ನು ಕನ್ನಡದಲ್ಲಿಯೂ ಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಲು ಸರಕಾರವು ಮುಂದಾಗಿರುವುದು ಕನ್ನಡದ ಉಳಿವಿನ ದೃಷ್ಟಿಯಿಂದ ಅತ್ಯಂತ ಸ್ವಾಗತಾರ್ಹ ಕ್ರಮವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಪತ್ರ ಬರೆದಿರುವ ಅವರು, ಈ ಕ್ರಮ ವಿದ್ಯಾರ್ಥಿಗಳ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದ್ದು, ಇದು ಮಾದರಿ ನಡೆಯಾಗಿದೆ. ಈ ಸದಾಶಯವು ಸಾಕಾರಗೊಳ್ಳಬೇಕಾದಲ್ಲಿ ವಿಶ್ವವಿದ್ಯಾಲಯವು ಉಪನ್ಯಾಸಕರಿಗೆ ಗುಣಮಟ್ಟದ ತರಬೇತಿಯನ್ನು ನೀಡಿ ಕನ್ನಡದಲ್ಲಿ ಬೋಧಿಸುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಪದವಿ ಪಡೆಯುತ್ತೇವೆಂದು ಮುಂದೆ ಬರುವ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ನೀಡಿದಲ್ಲಿ ಅದು ಪ್ರೋತ್ಸಾಹದಾಯಕ ನಡೆಯಾಗುತ್ತದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣ ಕನ್ನಡದ ಮೂಲಕವೂ ಲಭ್ಯವಿದೆ ಎನ್ನುವ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾದ್ದು ಸರಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡದಲ್ಲಿ ಕಲಿಯುವ ಕೀಳರಿಮೆಯನ್ನು ತೊಡೆದುಹಾಕುವಲ್ಲಿ ಸರಕಾರ ವಿಶೇಷ ಪ್ರಯತ್ನ ನಡೆಸಬೇಕಾಗಿದೆ. ಕನ್ನಡದಲ್ಲಿಯೂ ಬೋಧಿಸುವ ಉಪನ್ಯಾಸಕರನ್ನು ಗುರುತಿಸಿ ಅವರನ್ನು ಕೂಡ ಪೆÇ್ರೀತ್ಸಾಹಿಸುವ ಕ್ರಮಕ್ಕೆ ಸರಕಾರ ಮುಂದಾದರೆ ಕನ್ನಡದ ಹಿತದೃಷ್ಟಿಯಿಂದ ಹೊಸ ಶಕೆ ಆರಂಭವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.