ಬಿಬಿಎಂಪಿ ಇತಿಹಾಸದಲ್ಲೇ ಮೊದಲ ಬಾರಿಗೆ 19,927.08 ಕೋಟಿ ಗಾತ್ರದ ಬಜೆಟ್: ‘ಬ್ರ್ಯಾಂಡ್ ಬೆಂಗಳೂರಿಗೆ’ ಆಧುನಿಕ ತಂತ್ರಜ್ಞಾನ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬರೋಬ್ಬರಿ 19,927.08 ಕೋಟಿ ರೂ.ಗಾತ್ರದ ಆಯವ್ಯಯ ಮಂಡನೆ ಆಗಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಪೂರಕವಾಗಲು ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು ಯೋಜನೆಗಳನ್ನು ಪರಿಚಯ ಮಾಡಲಾಗಿದೆ. ಜತೆಗೆ, ಆಧುನಿಕ ತಂತ್ರಜ್ಞಾನಕ್ಕೆ ಈ ಬಾರಿ ಒತ್ತು ನೀಡಲಾಗಿದ್ದು, ಕೃತಬುದ್ಧಿಮತ್ತೆ(ಎಐ)ಮೂಲಕ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆಯೂ ಬಿಸಿ ಮುಟ್ಟಿಸಲಿದೆ.
ಶನಿವಾರ ನಗರದ ಪುರಭವನ ಸಭಾಂಗಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ನೆ ಸಾಲಿನ ಆಯವ್ಯಯವನ್ನು ಬಿಬಿಎಂಪಿ ಆಡಳಿತಗಾರ ಆರ್.ಉಮಾಶಂಕರ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಮಂಡಿಸಿ, ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 19,930.64 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ಖರ್ಚು 19,927.08 ಕೋಟಿ ರೂ. ಇದೆ ಎಂದು ಘೋಷಣೆ ಮಾಡಿದರು.
ಪಾಲಿಕೆ ಕಂದಾಯ ಇಲಾಖೆಯಲ್ಲಿ 2024-25ನೆ ಸಾಲಿನಲ್ಲಿ 4,900ಕೋಟಿ ರೂ.ಸಂಗ್ರಹಿಸವುದರೊಂದಿಗೆ ದೇಶದಲ್ಲಿಯೇ ಅತಿಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ. 2025-26ರಲ್ಲಿ 5716 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ. ಪಾಲಿಕೆಯಲ್ಲಿ 25ಲಕ್ಷ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಿಬಿಎಂಪಿಯ ಎಲ್ಲ ಆಸ್ತಿಗಳಿಗೆ ಜಿಪಿಎಸ್ ಸ್ಥಳಾಧಾರಿತ ಐಡಿ ನೀಡಲಾಗುತ್ತಿದೆ ಎಂದು ಅವರು ಪ್ರಕಟಿಸಿದರು.
ಉಳಿದ ಖಾಸಗಿ ಆಸ್ತಿಗಳಿಗೆ ಜಿಐಎಸ್ ಇ-ಖಾತಾ ಆಸ್ತಿ ತೆರಿಗೆ ವ್ಯವಸ್ಥೆ ಮಾಡಲಾಗುವುದು. ಇದರಿಂದ 1000ಕೋಟಿ ರೂ. ಹೆಚ್ಚುವರಿ ಆಸ್ತಿ ತೆರಿಗೆ ಆದಾಯ ಬರುವ ನಿರೀಕ್ಷೆಯಿದೆ. ಈ ಬಾರಿಯ ಒಟ್ಟಾರೆ ಬಜೆಟ್ ನಲ್ಲಿ ಶೇ.65ರಷ್ಟು ಅಂದರೆ 12,952ಕೋಟಿ ರೂ.ಗಳನ್ನು ಬಂಡವಾಳ ವೆಚ್ಚ ಅಥವಾ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲಾಗುತ್ತಿದೆ.
ವಿಶ್ವಬ್ಯಾಂಕ್ ಬಾಹ್ಯ ನೆರವಿನ ಯೋಜನೆ, ಕೇಂದ್ರ ಸರಕಾರ ಅನುದಾನ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ರಾಜ್ಯ ಸರಕಾರದ ರಾಜಸ್ವ ಅನುದಾನ, ಬಂಡವಾಳ ಅನುದಾನ, ಹೆಚ್ಚುವರಿ ಅನುದಾನ ಸೇರಿ 8,778.94 ಕೋಟಿ ರೂ.ಗಳು 2025-26ನೆ ಸಾಲಿನಲ್ಲಿ ಪಾಲಿಕೆಗೆ ಲಭ್ಯವಾಗಲಿದೆ ಎಂದು ಆಯವ್ಯಯದಲ್ಲಿ ಅವರು ಉಲ್ಲೇಖಿಸಿದರು.
ಜನರಿಗೆ ತಲೆನೋವಾಗಿರುವ ಘನತ್ಯಾಜ್ಯ ಮತ್ತು ಕಸವಿಲೇವಾರಿಗೆ 4 ದಿಕ್ಕುಗಳಲ್ಲಿ 4 ಭಾಗಗಳಾಗಿ ವಿಂಗಡಣೆ ಹಾಗೂ ಸಂಚಾರ ದಟ್ಟಣೆಗೆ ರಸ್ತೆ ಮೂಲ ಸೌಕರ್ಯ ಜಾಲ, ಸುರಂಗ ಮಾರ್ಗಗಳು, ಎಲಿವೇಟೆಡ್ ಕಾರಿಡಾರ್, ರಾಜಕಾಲುವೆ ಪಕ್ಕದಲ್ಲಿ ರಸ್ತೆಗಳ ನಿರ್ಮಾಣ, ವೈಟ್ ಟಾಪಿಂಗ್, ಸೈ-ಡೆಕ್ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.
ಪಾದಚಾರಿ ಮೊದಲು ಎಂಬ ತತ್ವದಡಿ ಪ್ರಸ್ತುತ ನಿರ್ಮಿಸಲಾಗುತ್ತಿರುವ ಆರ್ಟೀಯಲ್ ಮತ್ತು ಸಬ್ ಆರ್ಟೀಯಲ್ ರಸ್ತೆಗಳೊಂದಿಗೆ ಮುಂದೆ ನಿರ್ಮಿಸಲಾಗುವ ರಸ್ತೆಗಳನ್ನು ಒಳಗೊಂಡಂತೆ ಸುಮಾರು ಸಾವಿರ ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುವುದು.
ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆಆರ್‍ಪುರಂ ಲೌರಿ ಜಂಕ್ಷನ್ ಮುಖಾಂತರ ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ಹೊರವರ್ತುಲ ರಸ್ತೆಯಲ್ಲಿ ಹಲವಾರು ಐಟಿಬಿಟಿ ಕಂಪೆನಿಗಳಿದ್ದು, ಈ ಪ್ರದೇಶದ ಉನ್ನತಿಗಾಗಿ ರಾಜ್ಯ ಸರ್ಕಾರ ಮೆಟ್ರೋ ಹಾಗೂ ಪಾಲಿಕೆ ಸಹಯೋಗದೊಂದಿಗೆ 400ಕೋಟಿ ರೂ. ವೆಚ್ಚದಲ್ಲಿ 22.7 ಕಿ.ಮೀ ರಸ್ತೆಯನ್ನು ಜಾಗತಿಕ ಮಟ್ಟದೊಂದಿಗೆ ಉನ್ನತೀಕರಿಸಲಾಗಿದೆ.
‘ಬ್ರ್ಯಾಂಡ್ ಬೆಂಗಳೂರು’ ಪ್ರತ್ಯೇಕ ಎಸ್ಕ್ರೋ ಖಾತೆ ತೆರೆದು ಮೂರು ವರ್ಷದ ಅವಧಿಯಲ್ಲಿಯೇ 2828 ಕೋಟಿ ರೂಪಾಯಿ ವೆಚ್ಚ ಮಾಡಿ ಸುರಂಗ ಮಾರ್ಗ, ಸಂಚಾರ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ನಾಗರಿಕರಿಗೆ ಪರಿಚಯ ಮಾಡಲಾಗುವುದೆಂದು ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.
ಸ್ವಚ್ಛ ಬೆಂಗಳೂರು: ‘ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛತೆಯು ಮುಖ್ಯವಾಗಿದೆ’ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನಂಬಿಕೆಯಂತೆ, ನಾವು ಸ್ವಚ್ಚತೆಯನ್ನು ಕಾಪಾಡಿಕೊಳ್ಳದಿದ್ದರೆ ಆರ್ಥಿಕ ಉನ್ನತಿಯನ್ನು ಸಾಧಿಸಿದರೂ ಸಹ ಅದು ವ್ಯರ್ಥ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛ ಬೆಂಗಳೂರು ಕಾರ್ಯ ಯೋಜನೆ ಅಡಿಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಮತ್ತು ತಜ್ಞರು ನೀಡಿದ ಅಭಿಪ್ರಾಯಗಳನ್ನು ಪರಿಗಣಿಸಿ,
ಮುಂದಿನ 30 ವರ್ಷಗಳ ವರೆಗೆ ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ನಗರದ 4 ದಿಕ್ಕುಗಳಲ್ಲಿ ಪ್ರತಿ ಪ್ಯಾಕೇಜ್‍ನಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಯೋಜಿಸಿದಂತೆ, 4 ಪ್ಯಾಕೇಜ್‍ಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಈ ವರ್ಷ ಕಾರ್ಯರೂಪಕ್ಕೆ ತರಲಾಗುವುದು ಎಂದು ಪ್ರಕಟಿಸಿದರು.
ಪಾಲಿಕೆ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಪ್ರಾಥಮಿಕ ಘನತ್ಯಾಜ್ಯ ಸಂಗ್ರಹಣೆ ಮತ್ತು ದ್ವಿತೀಯ ಹಂತದ ತ್ಯಾಜ್ಯ ವಿಲೇವಾರಿಗಾಗಿ ನೂತನ ವ್ಯವಸ್ಥೆಯನ್ನು ಈ ಸಾಲಿನಲ್ಲಿ ಅನುಷ್ಟಾನಗೊಳಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಶೇಖರಣೆಗೊಂಡ 97.82 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಿ, ಮಂಡೂರು ಹಂತ-1 ಘಟಕದಲ್ಲಿ ಬಯೋಮೈನಿಂಗ್ ಮುಖೇನ ಹಾಗೂ ಬೆಲ್ಲಹಳ್ಳಿ ಘಟಕದಲ್ಲಿ ಬಯೋ-ರೆಮಿಡಿಯೇಷನ್ ಮೂಲಕ ಒಟ್ಟು 47.60 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ.
ಪ್ರಸ್ತುತ ಸಾಲಿನಲ್ಲಿ ಮಂಡೂರು ಹಂತ-2, ಮಾವಳ್ಳಿಪುರ, ದೊಡ್ಡಬಿದರಕಲ್ಲು, ಲಕ್ಷ್ಮೀಪುರ, ಬಿಂಗೀಪುರ ಮತ್ತು ಸುಬ್ಬರಾಯನಪಾಳ್ಯದಲ್ಲಿ ಅಂದಾಜು 39.07 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಯನ್ನು ಸ್ವಚ್ಛ ಭಾರತ ನಗರ 2.0 ಅನುದಾನದಡಿಯಲ್ಲಿ ಕೇಂದ್ರ, ರಾಜ್ಯ ಹಾಗೂ ಪಾಲಿಕೆಯ ಸಂಪನ್ಮೂಲದಿಂದ ಒಟ್ಟು ಅಂದಾಜು 187 ಕೋಟಿ ಮೊತ್ತದಲ್ಲಿ ನಿರ್ವಹಿಸಲು ಕ್ರಮ ವಹಿಸಲಾಗುವುದು ಎಂದೂ ಹರೀಶ್ ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಂದಾಜು 4500 ಮೆ.ಟನ್ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪ್ರಸ್ತುತ ಪಾಲಿಕೆಯಲ್ಲಿ 1750 ಮೆ.ಟನ್ ತ್ಯಾಜ್ಯವನ್ನು ಸಂಸ್ಕರಿಸುವ 2 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ತ್ಯಾಜ್ಯವನ್ನು ವಾರ್ಡ್‍ಗಳಿಂದ ಸಂಗ್ರಹಿಸಿ, ಹಾಲಿ ನಿರ್ವಹಿಸುತ್ತಿರುವ ಘಟಕಕ್ಕೆ ವಿಲೇವಾರಿ ಮಾಡಲು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯವನ್ನು 3 ಪ್ಯಾಕೇಜ್‍ಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಅನುಷ್ಠಾನಗೊಳಿಸಲಾಗುವುದು.
ಉಳಿದ 3000 ಮೆ.ಟನ್ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಗಾಗಿ ಪ್ರತಿನಿತ್ಯ 750 ಮೆ.ಟನ್ ಸಾಮಥ್ರ್ಯದಂತೆ 4 ಪ್ಯಾಕೇಜ್‍ಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಈ ಆರ್ಥಿಕ ವರ್ಷದಲ್ಲಿ ಕಾರ್ಯರೂಪಕ್ಕೆ ತರಲಾಗುವುದು.
ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವರ್ಗಾವಣೆ ಸಮಯದಲ್ಲಿ ನಿರ್ಮಾಣವಾಗುವ ಬ್ಲಾಕ್ ಸ್ಪಾಟ್‍ಗಳನ್ನು ತಡೆಗಟ್ಟಲು ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸುವ ವರ್ಗಾವಣಾ ಕೇಂದ್ರ (ಟ್ರಾನ್ಸ್‍ಫರ್‍ಸ್ಟೇಷನ್) ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಬಿಟಿಎಂ ವಿಭಾಗದ ವಾರ್ಡ್ 148ರಲ್ಲಿ ಮತ್ತು ಚಾಮರಾಜಪೇಟೆ ವಿಭಾಗದ ವಾರ್ಡ್ 138 ರಲ್ಲಿ ಎರಡು ಘಟಕಗಳು ಕಾರ್ಯಾರಂಭಗೊಂಡಿದ್ದು, ಸರ್ವಜ್ಞನಗರ ವಿಭಾಗದಲ್ಲಿ ಒಂದು ಘಟಕದ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿರುತ್ತದೆ. 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಸ್ವಚ್ಛ ಭಾರತ ನಗರ 2.0 ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಘಟಕದಂತೆ ಒಟ್ಟು 27 ಟ್ರಾನ್ಸ್ ಫರ್ ಸ್ಟೇಷನ್‍ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.
ಪ್ರತಿನಿತ್ಯ 50 ಟನ್ ಸಾಮಥ್ರ್ಯದ ಬಯೋ ಸಿಎನ್‍ಜಿ ಘಟಕ, 5 ಮೆ.ಟನ್ ಸಾಮಥ್ರ್ಯದ 4 ಬಯೋ ಮಿಥನೈಸೇಶನ್ ಘಟಕ, ಪ್ರತಿನಿತ್ಯ 8 ಟನ್ ಸಾಮಥ್ರ್ಯದ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ, 25 ಟನ್ ಗೃಹ ಹಾನಿಕಾರಕ ನೈರ್ಮಲ್ಯ ತ್ಯಾಜ್ಯದಂತಹ ವಿಕೇಂದ್ರಿಕೃತ ಘಟಕಗಳನ್ನು ಈ ವರ್ಷ ಕಾರ್ಯಾರಂಭಿಸಲಾಗುವುದು. ಇದಲ್ಲದೆ ಪ್ರತಿ 300 ಟನ್ ಸಾಮಥ್ರ್ಯದ ಬಯೋ ಸಿಎನ್ ಜಿ ಘಟಕವನ್ನು ಗೇಲ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಣತ್ಯಾಜ್ಯ ನಿರ್ವಹಣೆಯಲ್ಲಿ ಹೆಚ್ಚಿನ ಸಾಮರ್ಥ್ಯದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಅಗತ್ಯತೆಗನು ಗುಣವಾಗಿ ಪ್ರತಿನಿತ್ಯ 1226 ಮೆ. ಟನ್ ಸಾಮಥ್ರ್ಯದ ಒಣತ್ಯಾಜ್ಯ ಸಂಸ್ಕರಿಸುವ ಎಂಆರ್‌ಎಫ್ ಯನ್ನು ಸ್ವಚ್ಛ ಭಾರತ ನಗರ 2.0 ಅನುದಾನ 104 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅದೇ ರೀತಿ, 6 ಕೋಟಿ ವೆಚ್ಚದಲ್ಲಿ ಕೆಸಿಡಿಸಿ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಘಟಕ ಮತ್ತು ತರಬೇತಿ ಕೇಂದ್ರವನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದರು.
ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವ್ಯಾಪ್ತಿಯ ಬೆಲ್ಲಹಳ್ಳಿ, ಮಿಟ್ಟಗಾನಹಳಿ, ಬಾಗಲೂರು, ಬೈಯಪ್ಪನಹಳ್ಳಿ ಹಾಗೂ ಕಣ್ಣೂರು ಭೂಭರ್ತಿ ಪ್ರದೇಶಗಳಲ್ಲಿ ಸಂಗ್ರಹಣೆಯಾಗಿರುವ ಪಾರಂಪರಿಕ ಲಿಚೆಟ್ ತ್ಯಾಜ್ಯ ಸಂಸ್ಕರಣೆಗಾಗಿ 474.89 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಜತೆಗೆ, ಪ್ರತ್ಯೇಕ ಕಮಾಂಡ್ ಕಂಟ್ರೋಲ್ ಕೊಠಡಿ ಸ್ಥಾಪಿಸಲಾಗುವುದು.
ಭೂಭರ್ತಿ ಪ್ರದೇಶಗಳ ಅಭಿವೃದ್ಧಿ ಮತ್ತು ಇತರೆ ಕಾಮಗಾರಿಗಳಿಗೆ 75 ಕೋಟಿ ಮೀಸಲಿಡಲಾಗಿದೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ಆಸ್ತಿಗಳಿಗೆ ಆವರಣ ಗೋಡೆ ಮತ್ತು ಬೇಲಿ ಅಳವಡಿಸಲು 50 ಕೋಟಿ, ವಿಕೇಂದ್ರೀಕೃತ ಸಂಗ್ರಹಣಾ ಕೇಂದ್ರಗಳ ಸ್ಥಾಪನೆ 55 ಕೋಟಿಗಳು, ಸ್ವಚ್ಛ ಭಾರತ ನಗರ 2.0 ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ ಅಗತ್ಯವಿರುವ ಕಾಮಗಾರಿಗೆ ಪಾಲಿಕೆಯ ವಂತಿಕೆ 100 ಕೋಟಿಗಳ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದ್ದು, ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಸ್ವಚ್ಛತೆಗಾಗಿ ಸುಧಾರಿತ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಬಳಕೆಗೆ 40 ಕೋಟಿ ಇರಿಸಲಾಗಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 5 ವರ್ಷಗಳ ಕಾಲ (ಗುತ್ತಿಗೆದಾರರ ಹಾಗೂ ನೇರ ವೇತನದಡಿ) ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ 1077 ಪೌರಕಾರ್ಮಿಕರುಗಳಿಗೆ ತಲಾ 10 ಲಕ್ಷಗಳಂತೆ ಒಟ್ಟಾರೆಯಾಗಿ 107.70 ಕೋಟಿಗಳ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರುವ ಬಡ್ಡಿ ಮೊತ್ತವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಪಾಲಿಕೆಯಿಂದ ನಿವೃತ್ತಿ ಹೊಂದುವ ಪೌರಕಾರ್ಮಿಕರ ಸಂಖ್ಯೆಗನುಗುಣವಾಗಿ ಪಾಲಿಕೆಯಿಂದ ಹೆಚ್ಚುವರಿ 55 ಕೋಟಿ ರೂಪಾಯಿ ಠೇವಣಿ ಇಡಲಾಗುತ್ತಿದೆ ಎಂದು ಘೋಷಣೆ ಮಾಡಿದರು.
ಅದೇ ರೀತಿ, 181 ಮಸ್ಟರಿಂಗ್ ಸ್ಥಳಗಳಲ್ಲಿ ಪೌರ ಕಾರ್ಮಿಕರುಗಳಿಗೆ ಸಮವಸ್ತ್ರಗಳನ್ನು ಬದಲಾಯಿಸಲು, ವೈಯಕ್ತಿಕ ಸಾಮಾಗ್ರಿಗಳನ್ನು ಇಡಲು, ವಿಶ್ರಾಂತಿ ಪಡೆಯಲು ಮತ್ತು ಶೌಚಾಲಯದ ವ್ಯವಸ್ಥೆಯನ್ನೊಳಗೊಂಡ ಸುವಿಧಾ ಕ್ಯಾಬಿನ್‍ಗಳನ್ನು ನಿರ್ಮಿಸಲಾಗಿದ್ದು, 52 ಸ್ಥಳಗಳಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ಪ್ರಮುಖವಾಗಿ 2025-26ನೆ ಸಾಲಿನಿಂದ ನಾಗರಿಕರಿಂದ ಕಸ ಸಂಗ್ರಹಣಾ ಬಳಕೆ ಶುಲ್ಕವನ್ನು ಆಸ್ತಿ-ತೆರಿಗೆಯೊಂದಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಹರೀಶ್ ಪ್ರಕಟಿಸಿದರು.
‘ಬ್ರ್ಯಾಂಡ್ ಬೆಂಗಳೂರು’ ಹಸಿರು..!
*ಬೆಂಗಳೂರಿನಲ್ಲಿ 5 ಲಕ್ಷ ಸಸಿ ಬೆಳೆಸಲು ವಿಶೇಷ ಅಭಿಯಾನ ಆರಂಭ
* ಅರಣ್ಯ ವಿಭಾಗದ ಎಲ್ಲ ಚಟುವಟಿಕೆಗಳಿಗೆ 51.69 ಕೋಟಿ ಮೀಸಲು
* ಹಾವು, ಪಕ್ಷಿಗಳು, ಪ್ರಾಣಿಗಳನ್ನು ರಕ್ಷಣೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪುನರ್ ವಸತಿ ಘಟಕ ಆರಂಭ
* 14 ಹೊಸ ಉದ್ಯಾನವನ ಅಭಿವೃದ್ಧಿ
* ಸಿಂಗಾಪುರ ಕೆರೆ ಬಳಿ 20 ಎಕರೆ ಸರಕಾರಿ ಭೂಮಿಯಲ್ಲಿ ಸಾರ್ವಜನಿಕ ಸೌಲಭ್ಯಯುಳ್ಳ ಸುಸಜ್ಜಿತ ಪಾರ್ಕ್ ನಿರ್ಮಾಣ
* ಪರಿಸರ ಪ್ರೇಮಿ ಯುವ ಪದವೀಧರರಿಗೆ ಪಾಲಿಕೆಯಿಂದಲೇ ಇಂಟರ್ನ್‍ಶೀಪ್ ಕಾರ್ಯಕ್ರಮ
* ಬ್ಲೂ-ಗ್ರೀನ್ ಪ್ರಶಸ್ತಿ ಪರಿಚಯ
* ಹವಾಮಾನ ಕ್ರಿಯಾ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ ಅನುಷ್ಟಾನಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ವಾರ್ಡ್ ಅನ್ನು ಆಯ್ಕೆಗೊಳಿಸಿ ಇದಕ್ಕಾಗಿ 28 ಕೋಟಿ ಮೀಸಲು
* ಉದ್ಯಾನವನಗಳ ಸೌಕರ್ಯಕ್ಕಾಗಿ 118 ಕೋಟಿ ಅನುದಾನ
* ಪಾರ್ಕ್‍ಗಳಲ್ಲಿ ಚಿಣ್ಣರಿಗಾಗಿಯೇ ಪ್ರತ್ಯೇಕ ಆಟಿಕೆ ಅಳವಡಿಕೆಗೆ ಕ್ರಮ
ಬ್ರ್ಯಾಂಡ್ ಬೆಂಗಳೂರು ಆರೋಗ್ಯ
* ರಕ್ತ ಪರೀಕ್ಷೆ ಸೇರಿದಂತೆ 60 ರೀತಿಯ ಆರೋಗ್ಯ ಪರೀಕ್ಷೆ ಉಚಿತ
* 26 ಹೊಸ ಕೇಂದ್ರಗಳಲ್ಲಿ ದಂತ ಚಿಕಿತ್ಸಾ ಸೇವೆ
* ನಾಗರೀಕರ ಆರೋಗ್ಯ ಸೇವೆಗೆ 144 ಎಲೆಕ್ಟ್ರಿಕ್ ವಾಹನಗಳು
* ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ತುರ್ತು ಆರೈಕೆಗಾಗಿ 26 ಆಂಬ್ಯುಲೆನ್ಸ್
* “ಬ್ರ್ಯಾಂಡ್ ಬೆಂಗಳೂರು-ಆರೋಗ್ಯಕರ ಬೆಂಗಳೂರು” ಅಡಿಯಲ್ಲಿ ನೂತನ 7 ಫಿಸಿಯೋಥೆರಪಿ ಘಟಕ ಸ್ಥಾಪನೆ
* ಗರ್ಭಿಣಿಯರು, ನವಜಾತ ಶಿಶುಗಳ ಆರೈಕೆಗೆ ವೇದಿಕೆ ಪಾಲಿಕೆ ಆರಂಭ
* 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200 ತಾಯಂದಿರ ಆರೈಕೆ ಪ್ರಾರಂಭ
* ಗರ್ಭಿಣಿಯರಿಗೆ ಪರಿಣಾಮಕಾರಿ ಚಿಕಿತ್ಸೆಗಾಗಿ 2 ರೆಫರಲ್ ಆಸ್ಪತ್ರೆ ಮೇಲ್ದರ್ಜೆಗೆ
* ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
* ಪಾಲಿಕೆಯು ಪ್ರಾಣಿ ಸಂತಾನ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 75,000 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ
* 1,80,000ಕ್ಕೂ ಹೆಚ್ಚು ನಾಯಿಗಳಿಗೆ ಸಂಯುಕ್ತ ಲಸಿಕೆ
* ಪಾಲಿಕೆಯ 6 ವಲಯಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯ ಪ್ರಾರಂಭ
* ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಅಂದಾಜು ರೂ.7.5 ಕೋಟಿ ವೆಚ್ಚದಲ್ಲಿ ಎರಡು ಹೊಸ ಎಬಿಸಿ ಕೇಂದ್ರ ಸ್ಥಾಪನೆ
* 54 ವಲಯಗಳಲ್ಲಿ ಪ್ರಾಣಿಗಳ ಚಿತಾಗಾರ ಸ್ಥಾಪನೆ
* ಬೆಂಗಳೂರಿನ ಎಲ್ಲ ಬೀದಿ ನಾಯಿಗಳಿಗೆ ಮೈಕ್ರೊ ಚಿಪ್ ಅಳವಡಿಸುವ ಗುರಿ
* ಬೀದಿ ನಾಯಿಗಳ ನಿರ್ವಹಣೆಗಾಗಿ 60 ಕೋಟಿ ಮೀಸಲು
* ನವೀಕೃತ ತಂತ್ರಜ್ಞಾನ ಬಳಸಿ ಕಸಾಯಿ ಖಾನೆ 5 ಕೋಟಿ ವೆಚ್ಚದಲ್ಲಿ ಆಧುನೀಕರಣ
* ಕಸಾಯಿಖಾನೆ ನಿರ್ಮಿಸಲು 10 ಕೋಟಿ ಅನುದಾನ, ನಿರ್ವಹಣೆಗಾಗಿ 2 ಕೋಟಿ ಅನುದಾನ
ಬ್ರ್ಯಾಂಡ್ ಬೆಂಗಳೂರು ಶಿಕ್ಷಣ
* ಪಾಲಿಕೆಯಲ್ಲಿ ಉಳಿದ 5 ವಲಯಗಳಲ್ಲಿ ಹೊಸ ಶಾಲೆ ಪ್ರಾರಂಭ
* ಇ-ಖಾತೆ ಮೂಲಕ ಶಾಲೆಯ ಆಸ್ತಿಗಳ ರಕ್ಷಣೆ
* ವಿವಿಧ ಭಾಷೆಗಳನ್ನು ಮಾತನಾಡುವ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಭಾಷೆಗಳ ಮ್ಯಾಪಿಂಗ್
* ಪಾಲಿಕೆಯ ಎಲ್ಲ ಶಾಲೆಗಳಲ್ಲಿ ಇಕೋ ಕ್ಲಬ್ ಪ್ರಾರಂಭ
* 58 ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಮಳೆನೀರು ಕೊಯ್ಲು, ಕೈ ತೋಟಗಳು ಮತ್ತು ಸೌರ ಮೇಲ್ಛಾವಣಿ ಫಲಕಗಳ ಸ್ಥಾಪನೆ
* ಪಾಲಿಕೆಯ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಾಸಿಕ ವೇತನ 2 ಸಾವಿರ ಹೆಚ್ಚಳ
* ಆಟದ ಮೈದಾನಗಳ ಅಭಿವೃದ್ಧಿಗಾಗಿ 30 ಕೋಟಿ
* ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ 120.35 ಕೋಟಿ
* ಬ್ರ್ಯಾಂಡ್ ಬೆಂಗಳೂರು ಶಿಕ್ಷಣ ಬೆಂಗಳೂರು ಕಾರ್ಯಕ್ರಮಕ್ಕಾಗಿ 10 ಕೋಟಿ ಮೀಸಲು