ಬಿಇಎಂಎಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬಿಎಂಆರ್‍ಸಿಎಲ್

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‍ಗೆ(ಬಿಎಂಆರ್‍ಸಿಎಲ್) ರೈಲುಗಳನ್ನು ನೀಡುವ ಸಲುವಾಗಿ ರೈಲು ಮತ್ತು ರಕ್ಷಣಾ ಕಂಪನಿಯಾದ ಬಿಇಎಂಎಲ್ ಸಂಸ್ಥೆಯು 405 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿದೆ.
ಒಪ್ಪಂದದಂತೆ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ಕ್ಕೆ ಏಳು ಹೆಚ್ಚುವರಿ ಮೆಟ್ರೋ ರೈಲುಗಳನ್ನು(42 ಕಾರುಗಳು) ಪೂರೈಸಬೇಕಾಗಿದೆ. ಇದರಿಂದಾಗಿ ಮೆಟ್ರೋನ ಒಟ್ಟು ರೈಲುಗಳ ಸಂಖ್ಯೆ 53(318 ಕಾರುಗಳು) ರಿಂದ 60ಕ್ಕೆ (360 ಕಾರುಗಳು) ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿರುವ ಬಿಇಎಂಎಲ್‍ನ ಆಂತರಿಕ ಎಂಜಿನಿಯರಿಂಗ್ ತಂಡಗಳಿಂದ ಸಂಪೂರ್ಣವಾಗಿ ವಿನ್ಯಾಸಗೊಳಿಸಲ್ಪಟ್ಟ ಮತ್ತು ಅಭಿವೃದ್ಧಿಪಡಿಸಲ್ಪಟ್ಟ ಈ ಅತ್ಯಾಧುನಿಕ ಚಾಲಕರಹಿತ ರೈಲು ಸೆಟ್‍ಗಳು ದೃಢವಾದ ಆರು ಕಾರುಗಳ ರಚನೆಯನ್ನು ಹೊಂದಿರುತ್ತವೆ. ಹೆಚ್ಚಿನ ಅಕರ್ಷಕ ಆಸ್ಟೆನಿಟಿಕ್ ಸ್ಟೇನ್‍ಲೆಸ್ ಸ್ಟೀಲ್ ಬಳಸಿ ನಿರ್ಮಿಸಲಾದ ಮೆಟ್ರೋ ಕಾರುಗಳನ್ನು ವರ್ಧಿತ ಬಾಳಿಕೆ, ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಕಾರಿನಲ್ಲಿ ಎರಡು ಛಾವಣಿಯ ಮೇಲೆ ಜೋಡಿಸಲಾದ ಸಲೂನ್ ಹವಾನಿಯಂತ್ರಣಗಳನ್ನು ಅಳವಡಿಸಲಾಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.