ಬೆಂಗಳೂರು | ಪತ್ನಿಯನ್ನು ಭೀಕರವಾಗಿ ಹತ್ಯೆಗೈದು ಸೂಟ್ಕೇಸ್ನಲ್ಲಿ ತುಂಬಿಟ್ಟ ಪತಿ
ಬೆಂಗಳೂರು : ಪತಿಯೇ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಸೂಟ್ ಕೇಸ್‌ಗೆ ತುಂಬಿರುವ ಭೀಕರ ಘಟನೆ ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರ ಮೂಲದ ಆರೋಪಿ ಪತಿ ರಾಕೇಶ್ ಎಂಬಾತ ಪತ್ನಿ ಗೌರಿ ಅನಿಲ್ ಸಾಂಬೆಕರ್(32)ರನ್ನು ಹತ್ಯೆಗೈದಿದ್ದಾನೆ. ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಆರೋಪಿ ಪತಿ ರಾಕೇಶ್ ಬಳಿಕ ಈ ವಿಚಾರವನ್ನು ಆಕೆಯ ಪೋಷಕರಿಗೆ ಕರೆ ಮಾಡಿ ಹೇಳಿದ್ದು, ಪೋಷಕರು ಮಹಾರಾಷ್ಟ್ರ ಪೊಲೀಸರ ನೆರವು ಕೋರಿದ್ದಾರೆ. ನಂತರ ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ಬೆಂಗಳೂರಿನ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
2 ವರ್ಷಗಳ ಹಿಂದೆ ಮದುವೆಯಾಗಿದ್ದ ರಾಕೇಶ್ ಹಾಗೂ ಗೌರಿ ಒಂದು ತಿಂಗಳ ಹಿಂದಷ್ಟೆ ದೊಡ್ಡಕಮ್ಮನಹಳ್ಳಿಯಲ್ಲಿ ಮನೆ ಪಡೆದು ವಾಸವಿದ್ದರು. ಇಬ್ಬರೂ ಸಹ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ವರ್ಕ್ ಫ್ರಂ ಹೋಮ್ ಇದ್ದ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯ ಬಾತ್ ರೂಮ್‌ನಲ್ಲಿ ಸೂಟ್ ಕೇಸ್‌ನಲ್ಲಿ ಗೌರಿಯ ಮೃತದೇಹ ಪತ್ತೆಯಾಗಿದೆ. ಆರೋಪಿ ರಾಕೇಶ್ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ, ಸೋಕೋ ತಂಡದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.