ಯತ್ನಾಳ್ ಉಚ್ಚಾಟಿಸಿ ‘ಬಿಜೆಪಿ ಕುಟುಂಬ ರಾಜಕೀಯ ಒಪ್ಪಿಕೊಂಡಿದೆ’ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡುವ ಮೂಲಕ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಎಂಬುದನ್ನು ಒಪ್ಪಿಕೊಂಡಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರು ಕುಟುಂಬ ರಾಜಕೀಯ, ಭ್ರಷ್ಟರ ವಿರುದ್ಧ ಹೋರಾಟ ಮಾಡುತ್ತಿದ್ದರು. ಈಗ ಯತ್ನಾಳ್ ಅವರ ಬಿಜೆಪಿ ಶುದ್ಧೀಕರಣ ಹೋರಾಟಕ್ಕೆ ಕೇಂದ್ರದ ಹೈಕಮಾಂಡ್ ಜಟ್ಕಾ ಕಟ್ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಬಿಜೆಪಿ ನಾಯಕರು ಯತ್ನಾಳ್ ಅವರನ್ನು ಉಚ್ಚಾಟನೆಗೊಳಿಸಿ ನಮಗೆ ಭ್ರಷ್ಟಾಚಾರ, ಕುಟುಂಬ ರಾಜಕೀಯ ಇಷ್ಟ ಎಂಬುದನ್ನು ತಿಳಿಸಿದ್ದಾರೆ. ಪೊಕ್ಸೋ ಆರೋಪ ಇರುವವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆಂಬ ಸಂದೇಶ ಕೊಟ್ಟಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸಂವಿಧಾನ ರಕ್ಷಣೆ ನಮ್ಮ ಪಕ್ಷದ ನಿಲುವು: ‘ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಲ್ಲೂ ಹೇಳಿಲ್ಲ. ತಿದ್ದುಪಡಿ ಬಗ್ಗೆ ನ್ಯಾಯಾಲಯದ ಉಲ್ಲೇಖ ಮಾಡಿ ಮಾತಾಡಿದ್ದಾರೆ ಅಷ್ಟೇ ಬಿಜೆಪಿ ಅವರಿಂದ ನಾವು ಸಂವಿಧಾನದ ಬಗ್ಗೆ ಕಲಿಯುವ ಅವಶ್ಯಕತೆ ಇಲ್ಲ. ಸಂವಿಧಾನ ರಕ್ಷಣೆ ನಮ್ಮ ಪಕ್ಷದ ನಿಲುವು. ಮನುಸ್ಕೃತಿ ನಮ್ಮ ಸಂವಿಧಾನ ಆಗಬೇಕೆಂದು ಹೇಳಿದವರು ಬಿಜೆಪಿಯವರು. ಮೋದಿ ಸರಕಾರ 400 ಸ್ಥಾನ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆಂದವರು ಬಿಜೆಪಿಯವರು. ಅಮಿತ್ ಶಾ ಸದನದಲ್ಲಿ ‘ಅಂಬೇಡ್ಕರ್ ಬಗ್ಗೆ ಜಪ ಮಾಡಬೇಡಿ’ ಅಂದರು. ಅದರ ಬಗ್ಗೆ ಯಾರು ಮಾತನಾಡಲ್ಲ’
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ