ʼಕಳಪೆ ಮೂಲಸೌಕರ್ಯʼ ಪ್ಯಾರಾ ಮೆಡಿಕಲ್ ಸಂಸ್ಥೆ ಮುಚ್ಚಲು ಡಾ.ಶರಣ ಪ್ರಕಾಶ್ ಪಾಟೀಲ್ ನಿರ್ದೇಶನ

ಬೆಂಗಳೂರು : ಕಳಪೆ ಗುಣಮಟ್ಟದ ಪ್ಯಾರಾ ಮೆಡಿಕಲ್ ಕಾಲೇಜುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳಪೆ ಮೂಲ ಸೌಕರ್ಯ ಹೊಂದಿರುವ ಸಂಸ್ಥೆಗಳು ಹಾಗೂ ಅಂಗಸಂಸ್ಥೆಗಳನ್ನು ಮುಚ್ಚಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ನಿರ್ದೇಶನ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪ್ಯಾರಾ ಮೆಡಿಕಲ್ ಮಂಡಳಿಯ ಪರಿಶೀಲನಾ ಸಭೆಯಲ್ಲಿ ಹಲವಾರು ಖಾಸಗಿ ಕಾಲೇಜುಗಳಲ್ಲಿನ ನ್ಯೂನತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಮೂಲಸೌಕರ್ಯ ಮತ್ತು ಬೋಧನಾ ಮಾನದಂಡಗಳನ್ನು ಪೂರೈಸಲು ವಿಫಲವಾದ ಸಂಸ್ಥೆಗಳನ್ನು ಕೂಡಲೇ ಮುಚ್ಚುವಂತೆ ಸೂಚಿಸಿದರು.
ಅಸಮರ್ಪಕ ಸೌಲಭ್ಯಗಳೊಂದಿಗೆ ಇಕ್ಕಟ್ಟಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಿವೆ. ಒಂದು ಸಂಸ್ಥೆಯು ನೂರಾರು ವಿದ್ಯಾರ್ಥಿಗಳಿಗೆ ಒಂದೇ ಸೂಕ್ಷ್ಮ ದರ್ಶಕವನ್ನು ನೀಡುತ್ತಿದೆ ಹಾಗೂ ಇನ್ನೊಂದು ಸರಿಯಾದ ಬೆಳಕಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ವರದಿ ನೀಡಿದರು.
ಭಾರಿ ಶುಲ್ಕ ಪಡೆದರೂ ಕಳಪೆ ಬೋಧನೆ: ಖಾಸಗಿ ಸಂಸ್ಥೆಗಳು ಅನುಮೋದನೆ ಪಡೆಯುವಾಗ ದಾರಿತಪ್ಪಿಸುವ ಮಾಹಿತಿ ನೀಡುತ್ತಿವೆ. ಭಾರಿ ಶುಲ್ಕವನ್ನು ವಿಧಿಸುತ್ತಿದ್ದರೂ ಅನುಮತಿಸಿದ ಗುಣಮಟ್ಟದ ಶಿಕ್ಷಣವನ್ನು ನೀಡಲು ವಿಫಲವಾಗಿವೆ ಎಂದು ಶರಣ ಪ್ರಕಾಶ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ 566 ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ 529 ಖಾಸಗಿಯಾಗಿ ನಡೆಸಲ್ಪಡುತ್ತಿದ್ದು, 2024-25 ಶೈಕ್ಷಣಿಕ ವರ್ಷದಲ್ಲಿ 22,256 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಖಾಸಗಿ ಕಾಲೇಜುಗಳು ಮೂರು ವರ್ಷಗಳ ಕೋರ್ಸ್‍ಗೆ ವಾರ್ಷಿಕವಾಗಿ 20 ಸಾವಿರ ರೂ. ಶುಲ್ಕ ವಿಧಿಸುತ್ತವೆ, ಸರಕಾರಿ ಸಂಸ್ಥೆಗಳು 8,500 ರೂ. ಶುಲ್ಕ ಪಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹತ್ತಕ್ಕೂ ಹೆಚ್ಚು ಕಾಲೇಜುಗಳು ಪ್ಯಾರಾ ಮೆಡಿಕಲ್ ಮಂಡಳಿಯ ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳನ್ನು ಇತರ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿರುವುದು ಬಹಿರಂಗವಾಗಿದೆ. ಹಲವಾರು ಸಂಸ್ಥೆಗಳು ದಾಖಲಾದ ಕೋರ್ಸ್‍ಗಳಿಗೆ ಅಗತ್ಯವಾದ ಬೋಧನೆ, ತರಬೇತಿಯನ್ನು ನೀಡುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಯಾವುದೇ ಪರಿಗಣನೆಯಿಲ್ಲದೆ ಅಂತಹ ಕಾಲೇಜುಗಳನ್ನು ಮುಚ್ಚಿ. ನಾವು ಈ ಸಂಸ್ಥೆಗಳಿಗೆ ಕಠಿಣ ಸಂದೇಶವನ್ನು ಕಳುಹಿಸಬೇಕು. ವಿದ್ಯಾರ್ಥಿಗಳನ್ನು ಉತ್ತಮ ಸಂಸ್ಥೆಗಳಿಗೆ ಸ್ಥಳಾಂತರಿಸಬೇಕು ಎಂದು ಶರಣ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ಯಾರಾ ಮೆಡಿಕಲ್ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದು ಮತ್ತು ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹಾಗೂ ಸೂಕ್ತ ವೃತ್ತಿಜೀವನಕ್ಕೆ ಸರಿಯಾದ ತರಬೇತಿಯನ್ನು ಪಡೆಯುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್ ಮತ್ತು ಪ್ಯಾರಾ ಮೆಡಿಕಲ್ ಮಂಡಳಿಯ ವಿಶೇಷ ಅಧಿಕಾರಿ ಡಾ.ವಿಜಯ್ ಕುಮಾರ್ ಉಪಸ್ಥಿತರಿದ್ದರು.