ಕಾಲಮಿತಿಯಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ದರೆ ‘ಬೆಂಗಳೂರು ಚಲೋ’ : ಮಂದಕೃಷ್ಣ ಮಾದಿಗ ಎಚ್ಚರಿಕೆ

ಬೆಂಗಳೂರು : ಕಾಲಮಿತಿಯೊಳಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡದಿದ್ದರೆ, ‘ಮಾದಿಗ ದಂಡೋರ’ ನೇತೃತ್ವದಲ್ಲಿ ಒಳಮೀಸಲಾತಿ ಜಾರಿಯಾಗಬೇಕೆಂದು ಬಯಸುವ ಮಾದಿಗ ಸಂಘಟನೆಗಳಿಂದ ಮತ್ತು ಮಾದಿಗೇತರ ದಲಿತ ಸಂಘಟನೆಗಳಿಂದ ಲಕ್ಷಾಂತರ ಜನರನ್ನು ಸೇರಿಸಿಕೊಂಡು ‘ಬೆಂಗಳೂರು ಚಲೋ’ ಹೋರಾಟ ಮಾಡಲಾಗುವುದು ಎಂದು ಮಾದಿಗ ದಂಡೋರ ಸಂಸ್ಥಾಪಕ ಮಂದಕೃಷ್ಣ ಮಾದಿಗ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಮಾದಿಗ ದಂಡೋರ ಸಂಘಟನೆ ವತಿಯಿಂದ ಒಳಮೀಸಲಾತಿ ಜಾರಿಯಲ್ಲಿ ಕರ್ನಾಟಕ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಹಮ್ಮಿಕೊಂಡಿದ್ದ ‘ರಾಜ್ಯ ಮಾದಿಗ ಮುಖಂಡರ ಸಮಾಲೋಚನಾ ಸಭೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾದಿಗ ದಂಡೋರದಿಂದ ರಾಜ್ಯದಲ್ಲಿ ಬೆಂಗಳೂರು ಚಲೋ ಕರೆ ಕೊಡುವುದಕ್ಕಿಂತ ಮೊದಲೇ ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ಜಾರಿ ಮಾಡಿದರೆ ರಾಜ್ಯ ಸರಕಾರಕ್ಕೆ ಒಳ್ಳೆಯದು ಎಂದು ಹೇಳಿದರು.
ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಹೇಳಿದ್ದರು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸರಕಾರಗಳು ಒಳಮೀಸಲಾತಿ ಜಾರಿ ಮಾಡುವಲ್ಲಿ ಯಶಸ್ವಿಯಾಗಿವೆ. ದಕ್ಷಿಣ ರಾಜ್ಯಗಳ ಪೈಕಿ ಒಳಮೀಸಲಾತಿ ಜಾರಿ ಮಾಡುವಲ್ಲಿ ಇನ್ನು ಕರ್ನಾಟಕ ಮಾತ್ರ ಬಾಕಿ ಇದೆ. ಗುರುವಾರ ನಾಗಮೋಹನ್ ದಾಸ್‍ರ ಆಯೋಗವು ಮಧ್ಯಂತರ ವರದಿ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ತಡ ಮಾಡದೇ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ, ಮಸೂದೆಯನ್ನು ಅಂಗೀಕರಿಸಿ ಕಾನೂನು ಮಾಡಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬ್ಯಾಕ್‍ಲಾಗ್ ಹುದ್ದೆಗಳು ಬಾಕಿ ಉಳಿದಿವೆ ಮತ್ತು ನೋಟಿಫೀಕೆಷನ್ಸ್ ಕೂಡ ನಿಂತಿದೆ. ರಾಜ್ಯದಲ್ಲಿ ಎಲ್ಲ ಜಾತಿಯ ನಿರುದ್ಯೋಗಿಗಳು ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಕಾಯುತ್ತಿದ್ದಾರೆ. ಎಲ್ಲ ಸಮುದಾಯದ ನಿರುದ್ಯೋಗಿಗಳಿಗೆ ನ್ಯಾಯ ಸಿಗಬೇಕೆಂದರೆ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಆದುದರಿಂದ ರಾಜ್ಯ ಸರಕಾರ ತಡ ಮಾಡದೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಮಂದಕೃಷ್ಣ ಮಾದಿಗ ಒತ್ತಾಯ ಮಾಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಗೋವಿಂದಯ್ಯ, ಮಾತಾಂಗ ಪರಿವಾರ ಅಧ್ಯಕ್ಷ ಆರ್.ಲೋಕೇಶ್, ಒಳಮೀಸಲಾತಿ ಹೋರಾಟಗಾರರಾದ ಪಾವಗಡ ಶ್ರೀರಾಮ್, ಎಸ್.ಮಾರಪ್ಪ, ಗುರುಮೂರ್ತಿ ಎಂ., ಡಾ.ವಿ. ಅಮರ, ರಮೇಶ್ ಚಕ್ರವರ್ತಿ, ಮುತ್ತಣ್ಣ ಬೆನ್ನೂರು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮಧ್ಯಂತರ ವರದಿ ಬಹಿರಂಗಪಡಿಸಿ: ‘ನ್ಯಾ.ನಾಗಮೋಹನ್ ದಾಸ್ ಆಯೋಗ ಪರಿಶಿಷ್ಟ ಜಾತಿ ಜನಸಂಖ್ಯೆ, ಉದ್ಯೋಗ ಲಭ್ಯತೆ ಸೇರಿದಂತೆ ನಿಖರ ಮಾಹಿತಿ ಕೊಟ್ಟಿದೆ ಎನ್ನುವ ವಿಶ್ವಾಸವಿದೆ. ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಸರಕಾರ ಸಂಪುಟದಲ್ಲಿ ಅನುಮೋದನೆ ಮಾಡುವುದರ ಮೂಲಕ ಅದನ್ನು ಬಹಿರಂಗ ಪಡಿಸಬೇಕು. ಶೇ.17ರಷ್ಟು ಮೀಸಲಾತಿಯನ್ನು ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದಾರೆ? ಯಾರು ಹಿಂದುಳಿದಿದ್ದಾರೆನ್ನುವ ದತ್ತಾಂಶಗಳನ್ನು ಸಂಗ್ರಹಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪುನೀಡಿರುವುದರಿಂದ ಅದಕ್ಕೆ ಪೂರಕವಾಗಿರುವ ವಾತಾವರಣ ಮತು ಮಾಹಿತಿಯನ್ನು ಕೊಟ್ಟಿರುತ್ತಾರೆನ್ನುವ ವಿಶ್ವಾಸವಿದೆ. ಸರಕಾರ ಕೂಡಲೇ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು’
-ಅಂಬಣ್ಣ, ಅರೋಲಿಕರ್ ಗಾಯಕ
ವಿಳಂಬ ಅರ್ಥಹೀನ: ‘ದೇಶದಲ್ಲಿ ಹಲವು ರಾಜ್ಯಗಳು ಈಗಾಗಲೇ ಒಳಮೀಸಲಾತಿಯನ್ನು ಜಾರಿ ಮಾಡಿವೆ. 30 ವರ್ಷಗಳಿಂದ ಒಳಮೀಸಲಾತಿ ಮಾಡಬೇಕೆಂದು ಹೋರಾಟಗಳು ನಡೆದಿವೆ ಮತ್ತು ಸರಕಾರದ ಗಮನವೂ ಸೆಳೆದಿವೆ. ಹೀಗಿರುವಾಗ ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ಧೋರಣೆ ಅರ್ಥಹೀನ. ಒಳಮೀಸಲಾತಿ ಜಾರಿ ಮಾಡದೇ ಇರುವುದರಿಂದ ಉದ್ಯೋಗ ಹಂಚಿಕೆ, ಇಲಾಖೆಗಳಿಗೆ ಹಣ ಹಂಚಿಕೆ ಮಾಡುವ ವಿಚಾರದಲ್ಲಿ ತೊಂದರೆ ಆಗುತ್ತಿದೆ. ರಾಜ್ಯದಲ್ಲಿ ಇನ್ನಷ್ಟು ಹೋರಾಟಗಳು ಉದ್ಭವವಾಗುವ ಮೊದಲೇ ಒಳಮೀಸಲಾತಿಯನ್ನು ಜಾರಿ ಮಾಡಬೇಕು’
-ಮತ್ತುರಾಜು, ಕರ್ನಾಟಕ ಅಹಿಂದ ರಾಜ್ಯಾಧ್ಯಕ್ಷ