ಉದ್ದೇಶ ಉದ್ದೇಶಪೂರ್ವಕವಾಗಿ ಬಿಜೆಪಿಯಿಂದ ಡಿಕೆಶಿ ವಿರುದ್ಧ ಅಪಪ್ರಚಾರ: ರಮೇಶ್ ಬಾಬು

Update: 2025-03-27 23:24 IST
ಉದ್ದೇಶ ಉದ್ದೇಶಪೂರ್ವಕವಾಗಿ ಬಿಜೆಪಿಯಿಂದ ಡಿಕೆಶಿ ವಿರುದ್ಧ ಅಪಪ್ರಚಾರ: ರಮೇಶ್ ಬಾಬು
  • whatsapp icon

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂವಿಧಾನ ಕುರಿತ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಈ ಘಟನೆ ಮೂಲಕ ಬಿಜೆಪಿಯವರ ನಡೆನುಡಿಯು ದೇಶದ ಜನರಿಗೆ ಮತ್ತಷ್ಟೂ ಪರಿಚಯವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.

ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಹೊಸದಿಲ್ಲಿಯಲ್ಲಿ ಖಾಸಗಿ ಸುದ್ದಿ ವಾಹಿನಿಗೆ ಮಾತನಾಡಿದ 28 ಸೆಕೆಂಡ್‍ಗಳ ವಿಡಿಯೊ ತುಣುಕನ್ನು ಇಟ್ಟುಕೊಂಡು ಬಿಜೆಪಿ ಅವರ ವಿರುದ್ಧ ಅಪಪ್ರಚಾರಕ್ಕೆ ಇಳಿದಿದೆ ಎಂದರು.

ಎಂದಿಗೂ ಸಹ ಈ ದೇಶದ ಕಾಂಗ್ರೆಸ್ ನಾಯಕರು, ಡಿಕೆ ಶಿವಕುಮಾರ್ ಆಗಲಿ ಯಾರೂ ಸಹ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಅಂಬೇಡ್ಕರ್ ಅವರ ತತ್ವ, ಆದರ್ಶ, ಚಿಂತನೆ ಜೊತೆಗೆ ನಾವು ಬೆಳೆಯುತ್ತಿದ್ದೇವೆ. ಅವರಂತೆ ಜಾತ್ಯಾತೀತ ತತ್ವಗಳನ್ನು ಒಪ್ಪಿ ನಡೆಯುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯಲು ಸಾಧ್ಯವೇ ಇಲ್ಲದ ಬಿಜೆಪಿಯವರು ಇಂತಹ ಕತೆಗಳನ್ನು ಸೃಷ್ಟಿ ಮಾಡಿದೆ ಎಂದು ಅವರು ತಿಳಿಸಿದರು.

ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಿಕೊಂಡು ಬರುವುದರಲ್ಲಿ ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ. ಅಂದಿನಿಂದ ಇಂದಿನವರೆಗೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಶಿವಕುಮಾರ್ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಇದೆಲ್ಲದರ ಮುಂದುವರೆದ ಭಾಗವೇ ದಿಲ್ಲಿಯ ಖಾಸಗಿ ಚಾನೆಲ್ ಅಲ್ಲಿ ಅವರು ಕೊಟ್ಟ ಹೇಳಿಕೆಯನ್ನು ಬಿಜೆಪಿ ತಿರುಚಿ ಹೀಗೆ ಪ್ರತಿಪಾದನೆ ಮಾಡಲಾಗಿದೆ ಎಂದರು.

ಈ ಬಾರಿಯ ಕರ್ನಾಟಕ ಬಜೆಟ್ ಅಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕುರಿತು ಪ್ರಸ್ತಾಪಿಸಲಾಗಿತ್ತು. ಇದರ ಕುರಿತು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಸಮರ್ಪಕವಾಗಿ ಉತ್ತರ ನೀಡಿದ್ದಾರೆ. ಅಲ್ಲದೆ, ಬಿಜೆಪಿ ಇದನ್ನು ತನಗೆ ಬೇಕಾದಂತೆ ಬಳಸಿಕೊಂಡಿತು. ಬಿಜೆಪಿಯವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಹಾಗೂ ಪ್ರಮುಖವಾಗಿ ಮೀಸಲಾತಿಯ ವಿರೋಧಿಗಳೆಂದು ದೂರಿದರು.

ಶಿವಕುಮಾರ್ ಅವರ ವಿರುದ್ಧ ಬಿಜೆಪಿ ಮಾಡಿರುವ ಪಿತೂರಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಖಂಡಿಸುತ್ತದೆ. ಬಿಜೆಪಿ ಹತಾಶೆಯಿಂದ ಇಂತಹ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದೆ. ಇಂಹತ ಪ್ರಯತ್ನಗಳು ಬಿಜೆಪಿಗೆ ತಿರುಗುಬಾಣವಾಗುವುದರಲ್ಲಿ ಸಂಶಯವಿಲ್ಲ. ಬಿಜೆಪಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ ಹೀಗೆ ಹಿಂಬಾಗಿಲ ಮೂಲಕ ಹಣಿಯಲು ಯತ್ನಿಸುತ್ತಿದೆ. ರಾಜಕೀಯವನ್ನು ನೇರವಾಗಿ ಮಾಡಬೇಕೆ ಹೊರತು ಹೀಗೆ ತೆರೆಮರೆಯಲ್ಲಿ ಅಲ್ಲ. ಇದು ಹತಾಶ ಮನಸ್ಥಿತಿ ಎಂದು ರಮೇಶ್ ಬಾಬು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ, ಬಿಬಿಎಂಪಿ ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News