‘ಹಾಲಿನ ದರ ಏರಿಕೆ’ ಪ್ರಸ್ತಾವ ಹಿಂಪಡೆಯಲು ವಿಪಕ್ಷಗಳ ಒತ್ತಾಯ

Update: 2025-03-27 18:58 IST
‘ಹಾಲಿನ ದರ ಏರಿಕೆ’ ಪ್ರಸ್ತಾವ ಹಿಂಪಡೆಯಲು ವಿಪಕ್ಷಗಳ ಒತ್ತಾಯ
  • whatsapp icon

ಬೆಂಗಳೂರು : ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 4 ರೂಪಾಯಿಗಳಷ್ಟು ಹೆಚ್ಚಳಕ್ಕೆ ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ಜನಸಾಮಾನ್ಯರು ಸೇರಿದಂತೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಾಲಿನ ದರ ಏರಿಕೆ ಪ್ರಸ್ತಾವವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.

ಜೇಬಿಗೆ ಕತ್ತರಿ: ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಹೆಣಗಾಡುತ್ತಿದ್ದು, ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನರಿಗೆ ಬೆಲೆ ಏರಿಕೆಯ ದೌರ್ಭಾಗ್ಯವನ್ನು ನಿರಂತರ ಹೇರುತ್ತಲೇ ಬರುತ್ತಿದೆ. ಕುಡಿಯುವ ನೀರು, ವಿದ್ಯುತ್ ಬಿಲ್, ಸಾರಿಗೆ, ಅಗತ್ಯ ವಸ್ತುಗಳು ಹೀಗೆ ಒಂದರ ಮೇಲೊಂದರಂತೆ ಬೆಲೆ ಏರಿಕೆಯ ಬಿಸಿಯನ್ನು ಜನ ಅನುಭವಿಸುತ್ತಿರುವ ಹೊತ್ತಿನಲ್ಲೇ, ಈ ಸರಕಾರ 2ನೇ ಬಾರಿ ಹಾಲಿನ ದರ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆ ಬರೆ ಎಳೆಯುವಲ್ಲಿ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸದ್ಯ ಹಾಲಿನ ದರ 4ರೂ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ನಿರ್ಧಾರ ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ. ಹೈನುಗಾರಿಕೆ ಅವಲಂಬಿಸಿರುವ ರೈತ ಸಮುದಾಯಕ್ಕೆ ಹೆಚ್ಚಿನ ದರ ಹಾಗೂ ಪ್ರೋತ್ಸಾಹ ಧನವನ್ನು ಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಬೇಕೇ ಹೊರತು, ಈ ಕಾರಣವನ್ನು ಮುಂದಿಟ್ಟುಕೊಂಡು ಜನರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿಸಲು ಹೊರಟಿರುವುದು ‘ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನಡೆಯಾಗುತ್ತದೆ' ಎಂದು ಟೀಕಿಸಿದ್ದಾರೆ.

‘ರೈತರನ್ನೂ ಉತ್ತೇಜಿಸಬೇಕು ಜನಸಾಮಾನ್ಯರ ಹಿತಾಸಕ್ತಿಯನ್ನೂ ಕಾಪಾಡಬೇಕು, ಇದು ಸಮರ್ಥ ಜನಪರ ಹಾಗೂ ಯೋಗ್ಯ ಸರಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಇಂತಹ ಯಾವ ಅರ್ಹತೆಗಳೂ ಕಾಂಗ್ರೆಸ್ ಸರಕಾರಕ್ಕೆ ಇಲ್ಲವೇ ಇಲ್ಲ. ಸರಕಾರದ ಜನವಿರೋಧಿ ಧೋರಣೆಯನ್ನು ಬಿಜೆಪಿ ನಿರಂತರ ಪ್ರತಿಭಟಿಸುತ್ತಲೇ ಬರುತ್ತಿದ್ದರೂ ಈ ಸರಕಾರ ಜನಾಕ್ರೋಶಕ್ಕೆ ಕ್ಯಾರೇ ಎನ್ನುತ್ತಿಲ್ಲ, ಅಧಿಕಾರಕ್ಕಾಗಿ ಕಚ್ಚಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಸರಕಾರದ ಅಂಗಳದಲ್ಲಿ ಏನೇನು ಈಗ ಉಳಿದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಏರಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬ ಪರಿಸ್ಥಿತಿ ಇರುವುದನ್ನು ಸರಕಾರ ಅನಾವರಣಗೊಳಿಸಿಕೊಳ್ಳುತ್ತಿದೆ. ಪ್ರತಿಯೊಂದು ಕುಟುಂಬವೂ ಬಳಸುವ ಹಾಲಿನ ದರವನ್ನು ಏರಿಸಲು ಸಂಪುಟ ನಿರ್ಧರಿಸಿರುವ ಸರಕಾರ ಈ ನಿರ್ಧಾರದಿಂದ ಹಿಂದೆ ಸರಿಯಲಿ’ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಯುಗಾದಿ ಉಡುಗೊರೆ: ‘ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರ, ಬೆಲೆ ಏರಿಸುವುದನ್ನೇ ನಿತ್ಯ ಕಾಯಕವಾಗಿಸಿಕೊಂಡು ಜನಸಾಮಾನ್ಯರನ್ನು ದಿನೇ ದಿನೇ ಸುಲಿಗೆ ಮಾಡುತ್ತಿದೆ. ನಂದಿನ ಹಾಲಿನ ದರ 4 ರೂ.ಹೆಚ್ಚಿಸಿ ರಾಜ್ಯದ ಜನರಿಗೆ ಯುಗಾದಿಗೆ ಉಡುಗೊರೆ ನೀಡಿದೆ ಎಂದು ಜೆಡಿಎಸ್ ಲೇವಡಿ ಮಾಡಿದೆ.

ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, 2 ವರ್ಷದಲ್ಲಿ 3 ಬಾರಿ ಹಾಲಿನ ದರ ಏರಿಕೆ ಮಾಡಿದ್ದು, ಲೀ.ಗೆ 9 ರೂ.ಗಳಷ್ಟು ಹೆಚ್ಚಳ ಮಾಡಿದೆ. ವಚನ ಭ್ರಷ್ಟ ಕಾಂಗ್ರೆಸ್ ಸರಕಾರ, ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಿದೆ, ಜೊತೆಗೆ ಹಾಲಿನ ಪ್ರೋತ್ಸಾಹ ಧನವನ್ನು ರೈತರಿಗೆ ಸರಿಯಾಗಿ ಕೊಡುತ್ತಿಲ್ಲ. ಸಿದ್ದರಾಮಯ್ಯ ಸರಕಾರ 2 ವರ್ಷದಲ್ಲಿ 3ನೇ ಬಾರಿಗೆ ಹಾಲಿನ ಬೆಲೆ ಏರಿಸಿ ಸಂಗ್ರಹಿಸುತ್ತಿರುವ ಸಾವಿರಾರು ಕೋಟಿ ರೂ.ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಜೇಬು ಸೇರುತ್ತಿದೆ?’ ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News